More

    ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಬಂಧನ: ಇವರ ಹಿನ್ನೆಲೆ ಇಲ್ಲಿದೆ

    ಬೆಂಗಳೂರು: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣ ಬಗೆದಷ್ಟು ಆಳ ಎಂಬಂತಾಗಿದ್ದು, ಎಡಿಜಿಪಿ ಅಮೃತ್​ ಪೌಲ್​ ಬಂಧನ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಲಬುರಗಿಯಲ್ಲಿ ಹೊತ್ತಿಕೊಂಡ ಅಕ್ರಮದ ಬೆಂಕಿ ಇಡೀ ರಾಜ್ಯಾದ್ಯಂತ ವ್ಯಾಪಿಸಿದ್ದು, ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಬಂಧನ ಕೆಲ ರಾಜಕಾರಣಿಗಳಲ್ಲಿ ಢವಢವ ಸೃಷ್ಟಿಸಿದೆ.

    ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ಆರಂಭದಲ್ಲೇ ದಟ್ಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರೇ ಡೀಲ್​ ಕುದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಮೊದಲ ತಲೆದಂಡ ಎಂಬಂತೆ ಏ.27ರಂದೇ ಅಮೃತ್ ಪೌಲ್ ಅವರನ್ನ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಇದೇ ಪ್ರಕರಣ ಸಂಬಂಧ ಈ ಹಿಂದೆ ಮೂರು ಬಾರಿ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು. ಇಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾದಾಗ ಸಿಐಡಿ ಬಂಧಿಸಿದೆ. ಅಂದಹಾಗೆ ಅಮೃತ್ ಪೌಲ್ ಅವರು ಹಿನ್ನೆಲೆ ಏನು ಗೊತ್ತಾ?

    ಪಂಜಾಬ್​ ಮೂಲದ ಅಮೃತ್​ ಪೌಲ್​, 1995ರ ಬ್ಯಾಚ್​ನ ಐಪಿಎಸ್ ಅಧಿಕಾರಿ. 2000-2003ರ ವರೆಗೆ ಉಡುಪಿ ಎಸ್​ಪಿ ಆಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಐಜಿಯಾಗಿ ಕೆಲಸ ಮಾಡಿದ ಅಮೃತ್ ಪೌಲ್, 2018ರಲ್ಲಿ ಸೆಂಟ್ರಲ್ ರೇಂಜ್ ಐಜಿಯಾಗಿ ನೇಮಕವಾದರು. 2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಹೊಂದಿದ್ದರು. ಕರ್ನಾಟಕದ ನೇಕಾತಿಯ ಸಂಪೂರ್ಣ ಜವಾಬ್ದಾರಿ ಇವರದ್ದೇ ಆಗಿತ್ತು. ಒಎಂಆರ್ ಶೀಟ್ ಕೊಠಡಿ ಕೀ ಇವರ ಉಸ್ತುವಾರಿಯಲ್ಲೇ ಇತ್ತು. 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮ ಪ್ರಕರಣದಲ್ಲಿ ಅಮೃತ್ ಪೌಲ್ ಹೆಸರು ಕೇಳಿ ಬಂದಿತ್ತು. ಪ್ರಕರಣದಲ್ಲಿ ಹೆಸರು ಕೇಳಿಬಂದ ಬೆನ್ನಲ್ಲೇ ಇವರನ್ನ ಎತ್ತಂಗಡಿ ಮಾಡಲಾಗಿತ್ತು.

    ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ ಎಂಬುದು ಗೊತ್ತಾದ ಬೆನ್ನಲ್ಲೇ ಕೆಲ ಅಧಿಕಾರಿಗಳನ್ನ ಸಿಐಡಿ ಬಂಧಿಸಿದೆ. ಇದೀಗ ಅಮೃತ್​ ಪೌಲ್​ ಅವರನ್ನೂ ಬಂಧಿಸಿದ್ದು, ಏಜೆಂಟ್​ಗಳ ಮತ್ತು ಇವರ ನಡುವಿನ ಸಂಬಂಧ, ಒಎಂಆರ್ ಶೀಟ್ ಟ್ಯಾಂಪರಿಂಗ್‌ ಹೇಗಾಯಿತು? ಎನ್ನುವುದರ ಬಗ್ಗೆ ತನಿಖೆಯಲ್ಲಿ ಬಯಲಾಗಬೇಕಿದೆ.

    ಹೇಗೆ ನಡೆದಿದೆ ಅಕ್ರಮ: ಕೆಲಸಕ್ಕೆ ಅರ್ಜಿ ಆಹ್ವಾನಿಸಿದ ಬಳಿಕ ಅಭ್ಯರ್ಥಿಗಳಿಂದ ಏಜೆಂಟ್​ಗಳು ಡೀಲ್​ ಕುದುರಿಸಿದ್ದಾರೆ. ನಂತರ ರಾಜಕೀಯ ಮುಖಂಡರು, ಅಧಿಕಾರಿಗಳ ಮುಖೇನ ಅಕ್ರಮ ಎಸಗಿದ್ದಾರೆ. ಪರೀಕ್ಷೆಗೂ ಒಂದು ದಿನ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವ ಜತೆಗೆ, ಡೀಲ್​ ಕುದುರಿಸಿದ ನಂತರ ಅಭ್ಯರ್ಥಿಗಳು ಬರೆದ ಒಎಂಆರ್​ ಶೀಟ್​ಗಳನ್ನು ಅಧಿಕಾರಿಗಳ ಕಚೇರಿಯಲ್ಲೇ ತಿದ್ದಿರುವುದಕ್ಕೆ ಸಿಐಡಿಗೆ ಪ್ರಾಥಮಿಕ ಸಾಕ್ಷ್ಯಾಧಾರ ಸಿಕ್ಕಿದೆ.

    ಬಂಧನಕ್ಕೆ ಒಳಪಟ್ಟಿರುವ ಅಭ್ಯರ್ಥಿಗಳು ವಿಚಾರಣೆ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿರುವ ಕೆಲ ಹಿರಿಯ ಪೊಲೀಸ್​ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಪುತ್ರರ ಹೆಸರನ್ನು ಹೇಳಿದ್ದರು. ಅಭ್ಯರ್ಥಿಗಳ ಹೇಳಿಕೆ ಆಧರಿಸಿ ತನಿಖೆ ಮುಂದುವರಿದಿದೆ. ಅಭ್ಯರ್ಥಿಗಳಿಂದ ತೆಗೆದುಕೊಂಡಿರುವ ಒಎಂಆರ್​ ಶೀಟ್​ ಕಾರ್ಬನ್​ ಪ್ರತಿಯಲ್ಲಿರುವ ಪ್ರಶ್ನೆಗಳ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳಿಗೆ ಮೂಲ ಉತ್ತರ ಪತ್ರಿಕೆಯಲ್ಲಿ ಉತ್ತರ ತಿದ್ದಿರುವುದು ಬೆಳಕಿಗೆ ಬಂದಿದೆ.

    PSI ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್​ ಪೌಲ್​ ಬಂಧನ, ಕೆಲ ರಾಜಕಾರಣಿಗಳಿಗೆ ಢವಢವ

    ಪರ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟ: ವಿಡಿಯೋ ವೈರಲ್​ ಆಗ್ತಿದ್ದಂತೆ ಮನದನೋವು ಬಿಚ್ಚಿಟ್ಟ ಸಂತ್ರಸ್ತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts