PSI ನೇಮಕಾತಿ ಅಕ್ರಮ: ಎಡಿಜಿಪಿ ಅಮೃತ್​ ಪೌಲ್​ ಬಂಧನ, ಕೆಲ ರಾಜಕಾರಣಿಗಳಿಗೆ ಢವಢವ

psi
Published on

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದ ಪಿಎಸ್​ಐ ಹುದ್ದೆ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್​ ಪೌಲ್​ ಅವರನ್ನ ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ದೊಡ್ಡ ದೊಡ್ಡವರನ್ನ ಬಿಟ್ಟು ಸಣ್ಣವರನ್ನ ಬಂಧಿಸ್ತಾರೆ. ಸತ್ಯ ಹೊರಗೆ ಬರಲ್ಲ ಎಂಬ ಆರೋಪ ದಟ್ಟವಾಗಿರುವ ನಡುವೆ ಎಡಿಜಿಪಿ ಅವರ ಬಂಧನ ಭಾರೀ ಸಂಚಲನ ಮೂಡಿಸಿದೆ.

ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರನ್ನು ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿಸುವ ಮೂಲಕ ಸಿಐಡಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಯನ್ನ ಬಲೆಗೆ ಕೆಡವಿದ್ದಾರೆ. ಅಮೃತ್​ ಪೌಲ್​ರ ಬಂಧನದಿಂದ ಹಲವು ರಾಜಕಾರಣಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಈ ಅಕ್ರಮ ಬೆಳಕಿಗೆ ಬಂದ ಸಂದರ್ಭದಲ್ಲಿ ನೇಮಕಾತಿ ವಿಭಾಗದಲ್ಲಿ ಎಡಿಜಿಪಿ ಆಗಿ ಅಮೃತ್​ ಪೌಲ್​ ಕಾರ್ಯ ನಿರ್ವಹಿಸುತ್ತಿದ್ದರು. ಆ ನಂತರ ಅವರನ್ನ ಏ.27ರಂದು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಸುಮಾರು 25 ಪೋಸ್ಟ್​ಗಳಿಗೆ ಸುಮಾರು 5 ಕೋಟಿ ರೂ. ಡೀಲ್​ ಕುದುರಿಸಿದ್ದರು ಎಂಬ ಆರೋಪ ಅಮೃತ್​ ಪೌಲ್​ ಮೇಲಿದೆ. ಈ ಸಂಬಂಧ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್​ ಪೌಲ್​ ಅವರು ಸೋಮವಾರ ಬೆಳಗ್ಗೆ ಸಿಐಡಿ ಕಚೇರಿಗೆ ನಾಲ್ಕನೇ ಬಾರಿಗೆ ವಿಚಾರಣೆ ಎದುರಿಸಲು ಆಗಮಿಸಿದ್ದರು. ಈ ವೇಳೆ ಅಮೃತ್​ ಪೌಲ್​ ಅವರನ್ನ ಸಿಐಡಿ ಬಂಧಿಸಿದೆ.

ಪಂಜಾಬ್ ಮೂಲದ ಅಮೃತ್ ಪೌಲ್​ 1995ರ ಬ್ಯಾಚ್​ನ ಐಪಿಎಸ್ ಅಧಿಕಾರಿ. ಎಂಎಸ್ಸಿ ಪದವಿ ಪಡೆದ ಬಳಿಕ ಯುಪಿಎಸ್​ಸಿ ಪರೀಕ್ಷೆ ಪಾಸ್​ ಮಾಡಿಕೊಂಡಿದ್ದರು.

ಪಿಎಸ್​ಐ ಹುದ್ದೆಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ತನಿಖಾ ವರದಿಯೊಂದಿಗೆ ಹೈಕೋರ್ಟ್​ಗೆ ಜೂ.30ರಂದು ಹಾಜರಾಗಿದ್ದ ಸಿಐಡಿ ಅಧಿಕಾರಿಗಳ ಮೇಲೆ ನ್ಯಾಯಮೂರ್ತಿ ಪಿ.ಸಂದೇಶ್ ಅಸಮಾಧಾನ ಹೊರಹಾಕಿದ್ದರು. ಈ ಪ್ರಕರಣದಲ್ಲಿ ಯಾವ ಮಿನಿಸ್ಟರ್ ಇರಲಿ, ಅಧಿಕಾರಿಗಳೇ ಇರಲಿ ಮೊದಲು ಕ್ರಮ ಕೈಗೊಳ್ಳಿ. ನಿಮಗೆ ಸ್ವತಂತ್ರ ಅಧಿಕಾರ ಕೊಟ್ಟಿದ್ದೀನಿ. ಈ ಪ್ರಕರಣದ ಸಂಪೂರ್ಣ ವರದಿಯನ್ನು ಕೋರ್ಟ್​ಗೆ ಕೊಡಬೇಕು ಎಂದು ಹೈಕೋರ್ಟ್​ ಎಚ್ಚರಿಸಿತ್ತು.

ಹೈಕೋರ್ಟ್​ಗೆ ಜು.7ರಂದು ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಬೇಕು. ಈ ಹಿನ್ನೆಲೆ ಅಮೃತ್ ಪಾಲ್ ಬಂಧನ ಭಾರೀ ಸಂಚಲನ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net