

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ರಾತ್ರಿ ಸಮಯ ಕಳ್ಳರ ಓಡಾಟವಿರುವ ಗುಮಾನಿಯಿಂದ ಸಾರ್ವಜನಿಕರು ಆತಂಕಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಡೂರು-ಕುಂಜ್ಞಾಡಿ ಗ್ರಾಮ ಪಂಚಾಯತಿಯಲ್ಲಿ ಪೊಲೀಸ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಮಕ್ಷಮದಲ್ಲಿ ಮಂಗಳವಾರ ತುರ್ತು ಸಭೆ ನಡೆಯಿತು.
ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೀಸಿನಪಾರೆ, ನಿಡುಟಿ, ಹುಯ್ಯಂಗಾರು, ಬೋಗಿಹಾಡಿ, ಜನ್ನಾಲು, ಹೊಸೂರು, ಜಡ್ಕಲ್, ಇಡೂರು-ಕುಂಜ್ಞಾಡಿ ಭಾಗದಲ್ಲಿ ಹಾಗೂ ಬೈಂದೂರು ವ್ಯಾಪ್ತಿಯ ತಗ್ಗರ್ಸೆ, ಶಿರೂರು, ಕಿರಿಮಂಜೇಶ್ವರ, ಯಳಜಿತ್ ಮೊದಲಾದ ಭಾಗದಲ್ಲಿ ಕಳ್ಳರ ಹಾವಳಿ ಕುರಿತು ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಕಾರ್ಯಾಚರಣೆ ಬಿಗುಗೊಳಿಸಲು ಯೋಜನೆ ರೂಪಿಸಲಾಗಿದ್ದು, ಸಂಶಯಾಸ್ಪದರ ಮೇಲೆ ನಿಗಾ ಇಡಲಾಗುತ್ತದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಸಾರ್ವಜನಿಕರು ಸಂಶಯಾಸ್ಪದರ ಕುರಿತು ಠಾಣೆಗೆ ಮಾಹಿತಿ ನೀಡಬೇಕಿದ್ದು, ಈಗಾಗಲೇ ಜಡ್ಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ತುರ್ತು ಗ್ರಾಮಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ದಾರಿದೀಪ ಅಳವಡಿಕೆ ಹಾಗೂ ದುರಸ್ತಿ ಸಹಿತ ಮುಂಜಾಗ್ರತಾ ಕ್ರಮ ಬಿಗುಗೊಳಿಸಲಾಗಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.