ನ್ಯಾಷನಲ್ ಕಾಲೇಜು ಮೆಟ್ರೊಗೆ ಎಚ್ಚೆನ್ ಹೆಸರಿಡಲು ಸುರೇಶ್ ಕುಮಾರ್ ಮನವಿ

metro new
metro
Published on

ಬೆಂಗಳೂರು: ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ‘ನಮ್ಮ ಮೆಟ್ರೋ’ ನಿಲ್ದಾಣಕ್ಕೆ ‘ಡಾ. ಎಚ್.ಎನ್. ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ರಾಜಧಾನಿ ಬೆಂಗಳೂರಿನ ಜನರ ಸಂಚಾರ ನಾಡಿಯಾಗಿರುವ ‘ನಮ್ಮ ಮೆಟ್ರೋ’ ರೈಲು ನಿಲ್ದಾಣಗಳಿಗೆ ಆಯಾ ಭಾಗದ ವಿಶೇಷಗಳು ಹಾಗೂ ಆಯಾ ಪ್ರದೇಶದಲ್ಲಿ ತಮ್ಮ ಸೇವೆ ಮೂಲಕ ಪ್ರಸಿದ್ಧರಾಗಿರುವ ಉದ್ಧಾಮರ ಹೆಸರುಗಳನ್ನು ಇಟ್ಟು ವಿಶಿಷ್ಟವಾಗಿ ಗೌರವಿಸಲಾಗಿದೆ. ಅದೇ ರೀತಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಹಿರಿಯ ಶಿಕ್ಷಣ ಪ್ರೇಮಿ ಡಾ. ಎಚ್. ನರಸಿಂಹಯ್ಯನವರ ಹೆಸರನ್ನು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಪ್ರಮುಖ ಭಾಗ ಬಸವನಗುಡಿಯ ನ್ಯಾಷನಲ್ ಕಾಲೇಜು ಪ್ರದೇಶ. ನ್ಯಾಷನಲ್ ಕಾಲೇಜು ಎಂದ ಕೂಡಲೇ ಎಲ್ಲರ ನೆನಪಿಗೆ ಬರುವ ಹೆಸರು ನಮ್ಮೆಲ್ಲರ ಮೆಚ್ಚಿನ ಗೌರವಾನ್ವಿತ ಡಾ. ಎಚ್. ನರಸಿಂಹಯ್ಯ ಅವರದು. ಅವರು ಪ್ರಗತಿಪರ ಧೋರಣೆಗೆ ಹೆಸರಾಗಿ ಇಡೀ ತಮ್ಮ ಜೀವನವನ್ನು ಇಡೀ ಸಮಾಜಕ್ಕಾಗಿ ಅರ್ಪಿಸಿಕೊಂಡವರು. ಅವರನ್ನು ನೆನಪಿಸಿಕೊಳ್ಳದೇ ನ್ಯಾಷನಲ್ ಕಾಲೇಜು ಹೆಸರನ್ನು ಪ್ರಸ್ತಾಪಿಸಲು ಸಾಧ್ಯವೇ ಇಲ್ಲ. ಸರಳತೆಯೇ ಮೈವೆತ್ತಂತಿದ್ದು ಸದಾ ಖಾದಿಯನ್ನೇ ಧರಿಸುತ್ತಿದ್ದ ಡಾ.ಎಚ್. ನರಸಿಂಹಯ್ಯನವರು ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸ್ನೇಹಮಯ ಮಾನವತಾವಾದಿಯಾಗಿದ್ದರಲ್ಲದೇ ರಾಷ್ಟ್ರೀಯವಾದಿಯೂ ಆಗಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ಅವರು ತಾವು ಅಲಂಕರಿಸಿದ ಯಾವುದೇ ಸ್ಥಾನಕ್ಕೂ ಗೌರವವನ್ನು ತಂದಿದ್ದರು. ಆ ಹೆಸರೇ ಎಲ್ಲರಿಗೂ ಪ್ರೇರಣೆ ತರುವಂತಹುದು. ಅಸಂಖ್ಯಾತ ಪ್ರತಿಭೆಗಳಿಗೆ ಬೆಳಕು ತೋರಿದವರು ಎಂದು ಸುರೇಶ್ ಕುಮಾರ್ ಪತ್ರದಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net