

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಬುಧವರ ಮೃತ್ತಿಕಾ ವಿಸರ್ಜನೆ ನಡೆಸುವ ಮೂಲಕ ಮಂಗಲೋತ್ಸವ ನಡೆದು ಎರಡು ತಿಂಗಳ ಕಾಲ ನಡೆದುಬಂದ ವ್ರತಾಚರಣೆ ಸಂಪನ್ನಗೊಂಡಿತು.
ಬೆಳಗ್ಗೆ ಪೂಜೆ, ಸೀಮೋಲ್ಲಂಘನ, ಭಜನೆ 60 ದಿವಸಗಳ ಅಖಂಡ ಭಜನಾ ಸಂಕೀರ್ತನೆ ಸಮಾರೋಪ ನಡೆಯಿತು. ಬೆಳ್ತಂಗಡಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರುಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಭಜನಾ ಸಂಕೀರ್ತನ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಗುರುಗಳ ಆಶೀರ್ವಾದ ಲಭಿಸಬೇಕಾದರೆ ಶುದ್ಧ ಮನಸ್ಸಿನ ಪೂಜೆ ಅಗತ್ಯ. ಕಲುಷಿತ ಬುದ್ಧಿಯಲ್ಲಿರುವ ಮನುಜರಿಗೆ ಆಶೀರ್ವಚನ ಎಂದಿಗೂ ಫಲಿಸದು. ಬದುಕಿನಲ್ಲಿ ಜ್ಞಾನಿಗಳಾದಾಗ ಮಾತ್ರ ಶ್ರೇಷ್ಠ ಜೀವನ ಸಾಗಿಸಲು ಸಾಧ್ಯ. ಧಾರ್ಮಿಕ, ಸಾಂಸ್ಕೃತಿಕ ಜಗತ್ತಿನ ಅನಾವರಣಕ್ಕೆ ಚಾತುರ್ಮಾಸ್ಯ ಕಾರ್ಯಕ್ರಮ ಕಾರಣವಾಗಿದೆ ಎಂದು ತಿಳಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಉಜಿರೆ ಅಶೋಕ್ ಭಟ್ ನಿರೂಪಿಸಿದರು.
ಮಾಜಿ ಶಾಸಕ, ಕೇರಳ ಪೂರಕ್ಕಳಿ ಅಕಾಡೆಮಿ ಅಧ್ಯಕ್ಷ ಕೆ.ಕುಞಿರಾಮನ್ ಅವರ ನೇತೃತ್ವದಲ್ಲಿ ದೇವಳ ನಡೆಯಲ್ಲಿ ಪೂರಕ್ಕಳಿ ನಡೆಯಿತು. ಮಧಾಹ್ನ ಅಷ್ಟೋತ್ತರ ಶತನಾಳಿಕೇರ ಯಾಗದ ಪೂರ್ಣಾಹುತಿ, ಎಡನೀರುಶ್ರೀಗಳಿಂದ ಮಂತ್ರಾಕ್ಷತೆ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಭಾಗವತ ದಿನೇಶ್ ಅಮ್ಮಣ್ಣಾಯ ಹಾಗೂ ಹಿರಿಯ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಪುತ್ತೂರು ಉಪಸ್ಥಿತರಿದ್ದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು.
ಇಂದಿರಾ ಶರ್ಮ ಬೆಂಗಳೂರು ಹಾಗೂ ಮೇಧಾ ಮಂಜುನಾಥ್ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಶಬರಿಮಲೆ ಹರಿವರಾಸನಂ ಪ್ರಶಸ್ತಿ ಪುರಸ್ಕೃತ ಕಲೈ ಮಾಮಣಿ ವೀರಮಣಿ ರಾಜು ಮತ್ತು ಭಕ್ತಿಗಾನ ಗಂಧರ್ವ ಅಭಿಷೇಕ್ ರಾಜು ಚೆನ್ನೈ ಮತ್ತು ಬಳಗದವರಿಂದ ಭಕ್ತಿಗಾನ ಸಂಧ್ಯಾ ಕಾರ್ಯಕ್ರಮ ನಡೆಯಿತು.