

ಬೆಂಗಳೂರು: ಚೀನಾ ಮೂಲದ ಆನ್‌ಲೈನ್ ಶಿಕ್ಷಣ ಸಂಸ್ಥೆಗೆ ಸೇರಿದ 2 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿ ಎಲೆಕ್ಟ್ರಾನಿಕ್ಸ್ ಮತ್ತು ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ.
ಚೀನಾ ಮೂಲದ ಪಿಜನ್ ಎಜುಕೇಷನ್ ಟೆಕ್ನಾಲಜಿ ಇಂಡಿಯಾ ಪ್ರೈ.ಲಿ. ಕಂಪನಿ ಆನ್‌ಲೈನ್‌ನಲ್ಲಿ ಓಡಕ್ಲಾಸ್ ಹೆಸರಿನಲ್ಲಿ ತರಗತಿ ನಡೆಸುತ್ತಿದೆ.
ಅಕ್ರಮ ಹಣಕಾಸು ವಹಿವಾಟು ಆರೋಪದ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿವೆ. ಈ ಕಂಪನಿಯನ್ನು ಸಂಪೂರ್ಣ ಚೀನಾ ಉದ್ಯಮಿಗಳೇ ನಡೆಸುತ್ತಿದ್ದಾರೆ. ಕೇಮನ್ ದ್ವೀಪದಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕಂಪನಿಯ ಎಲ್ಲ ವ್ಯವಹಾರಗಳನ್ನು ನಿರ್ದೇಶಕ ಲಿಯು ಕ್ಯಾನ್ ಮತ್ತು ವೇದಾಂತ್ ಹಮಿರ್ವಾಸಿಯಾ ಎಂಬುವರು ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಂಪನಿಯ ಸಂಪೂರ್ಣ ವ್ಯವಹಾರಗಳನ್ನು ಚೀನಾದಿಂದ ಲಿಯು ಕ್ಯಾನ್ ನಿಯಂತ್ರಣ ಮಾಡುತ್ತಿದ್ದಾನೆ. ಭಾರತೀಯ ನಿರ್ದೇಶಕರಿಗೆ ಕಂಪನಿಯ ಯಾವುದೇ ವ್ಯವಹಾರಗಳ ಅಧಿಕಾರ ನೀಡಿಲ್ಲ. ಎಲ್ಲವನ್ನು ಲಿಯು ಕ್ಯಾನ್, ಸೂಚನೆಯಂತೆ ನಡೆಯುತ್ತಿವೆ.
ಕಂಪನಿಯ ಬ್ಯಾಂಕ್ ಖಾತೆಗಳಲ್ಲಿ ಅಧಿಕೃತ ಸಹಿಯನ್ನು ಚೀನಿ ಪ್ರಜೆಗಳು ಹೊಂದಿದ್ದಾರೆ. ಚೀನಾದಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಕಂಪನಿ ಹೆಸರಿನಲ್ಲಿ 82 ಕೋಟಿ ರೂ. ಗಳನ್ನು ಚೀನಾಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಇಷ್ಟೊಂದು ಹಣ ವರ್ಗಾವಣೆ ಆಗಿದೆ ಎಂಬುದನ್ನು ದಾಖಲೆ ಪತ್ರಗಳು ಇಲ್ಲ.
ಈ ಹಿನ್ನೆಲೆಯಲ್ಲಿ ಅಕ್ರಮ ಹಣಕಾಸು ವ್ಯವಹಾರದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಬ್ಯಾಂಕ್ ಸಂಬಂಧಪಟ್ಟ ಆ್ಯಪ್, ಡೇಟಾವನ್ನು ಜಪ್ತಿ ಮಾಡಲಾಗಿದೆ. ಈ ಕಂಪನಿಯ ಹಿಂದಿನ ನಿರ್ದೇಶಕರಾದ ಸುಶಾಂತ್ ಶ್ರೀವಾಸ್ತವ, ಪ್ರಿಯಾಂಕಾ ಖಂಡೇಲಾವಾಲ್ ಮತ್ತು 2022ರಲ್ಲಿ ರಾಜೀನಾಮೆ ನೀಡಿದ ಹಿಮಾಂಶು ಗಾರ್ಗ್ ಎಂಬಾತನನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.