

ಬೆಂಗಳೂರು: ನವರಾತ್ರಿ ನಿಮಿತ್ತ ಈ ಹೊತ್ತಿಗೆ ಟ್ರಸ್ಟ್ ಈ ಬಾರಿ ನವರಾತ್ರಿ ಕಾವ್ಯೋತ್ಸವವನ್ನು ಅಕ್ಟೋಬರ್ 17 ರಿಂದ 25ರ ತನಕ ಆಯೋಜಿಸಿದ್ದು, ಹದಿನೇಳು ಕವಿಗೋಷ್ಠಿಗಳು ನಡೆಯಲಿವೆ. ಇದರ ಆನ್ಲೈನ್ ಪ್ರಸಾರ ಇರಲಿದ್ದು, ಸಾಹಿತ್ಯಾಸಕ್ತರು ಭಾಗವಹಿಸಬಹುದು ಎಂದು ಈ ಹೊತ್ತಿಗೆಯ ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.
ಕವಿಗೋಷ್ಠಿಯ ನೇರಪ್ರಸಾರ ಫೇಸ್‌ಬುಕ್ ನಲ್ಲಿ ಲಭ್ಯವಿರುವ ಈ ಹೊತ್ತಿಗೆ ಪುಟದಲ್ಲಿ ( https://bit.ly/2SROd8L ) ಮತ್ತು E Hottige ಯುಟ್ಯೂಬ್ ಚಾನಲ್ ( https://bit.ly/3iX3lfN) ನಲ್ಲಿ ಪ್ರಸಾರಗೊಳ್ಳಲಿರುವ ಈ ಕಾವ್ಯೋತ್ಸವದ ನೇರ ಪ್ರಸಾರಗಳನ್ನು ವೀಕ್ಷಿಸಬಹುದು ಎಂದು ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.
ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಹೊತ್ತಿಗೆ ಹೀಗೊಂದು ಪ್ರಯತ್ನ ನಡೆಸಿದ್ದು, ಪ್ರತಿಭಾವಂತ ಕವಿಗಳ ಜತೆಗೆ ಪ್ರಸಿದ್ಧ ಕವಿಗಳೂ ಈ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಗೋಷ್ಠಿಗಳಲ್ಲಿ, ನಿತ್ಯದ ಸುದ್ದಿಯಾಗುತ್ತ ಎಲ್ಲರಲ್ಲೂ ಆತಂಕ ಮೂಡಿಸುತ್ತಿರುವ ದಿನೇದಿನೇ ಹೆಚ್ಚುತ್ತಿರುವ ಲೈಂಗಿಕ ಅತ್ಯಾಚಾರಗಳನ್ನು ಪ್ರತಿಭಟಿಸಿ, ಭಾಗವಹಿಸಲಿರುವ ಪ್ರತಿಯೊಂದು ತಂಡವೂ ಒಂದೊಂದು ಕವನ ರಚಿಸಿ ಓದಲಿದೆ.
ಪ್ರತೀ ತಂಡದಲ್ಲಿ ಆರು ಜನ ಕವಿಗಳು, ಇಬ್ಬರು ಹಾಡುಗಾರರು ಮತ್ತು ನಿರೂಪಕರು ಭಾಗವಹಿಸಲಿದ್ದಾರೆ. ಈ ಹದಿನೇಳು ತಂಡಗಳಲ್ಲಿ ಕರ್ನಾಟಕದ ಒಂಬತ್ತು ಜಿಲ್ಲೆಗಳ ಕವಿಗಳು ಮತ್ತು ಹಾಡುಗಾರರಿರುವ ಗೋಷ್ಠಿಗಳು ಪೂರ್ವಾಹ್ನ 11 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿವೆ. ಸಂಜೆ 5ರಿಂದ ರಾತ್ರಿ 10.30ರವರೆಗೆ ನಡೆಯಲಿರುವ ಗೋಷ್ಠಿಗಳಲ್ಲಿ ವಿದೇಶದಲ್ಲಿರುವ ಕನ್ನಡ ಕವಿಗಳ ನಾಲ್ಕು ತಂಡಗಳು, ಹೊರರಾಜ್ಯ ಗಳ ಮೂರು ತಂಡಗಳು ಹಾಗು ಕರ್ನಾಟಕದ ಯುವಕವಿಗಳ ಒಂದು ತಂಡವು ಭಾಗವಹಿಸಲಿವೆ ಎಂದು ಜಯಲಕ್ಷ್ಮಿ ಪಾಟೀಲ್ ತಿಳಿಸಿದ್ದಾರೆ.
ಭಾಗವಹಿಸಲಿರುವ ಜಿಲ್ಲೆಗಳು ಮತ್ತು ಗೋಷ್ಠಿಗಳ ಸಮಯ: (ಸಮಯ: ಬೆಳಗ್ಗೆ ೧೧ರಿಂದ ೧೨ ಗಂಟೆಯವರೆಗೆ) ಕಲಬುರಗಿ, ವಿಜಯಪುರ, ಮೈಸೂರು, ಹಾವೇರಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ ಮತ್ತು ಮಂಡ್ಯ.
ಭಾಗವಹಿಸಲಿರುವ ವಿದೇಶಿ ಮತ್ತು ಹೊರರಾಜ್ಯಗಳು: ಅಮೆರಿಕ (ರಾತ್ರಿ 9ರಿಂದ 10.30ರವರೆಗೆ), ಯುರೋಪ್ (ರಾತ್ರಿ 9ರಿಂದ 10ರವರೆಗೆ, ಕುವೈತ್ (ಸಂಜೆ 7ರಿಂದ 8ರವರೆಗೆ), ಆಸ್ಟ್ರೇಲಿಯಾ (ಸಂಜೆ 5ರಿಂದ 6ರವರೆಗೆ), ದೆಹಲಿ, ತೆಲಂಗಾಣ-ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಯುವಕವಿಗಳ ತಂಡ (ಸಂಜೆ 6ರಿಂದ 7ರವರೆಗೆ)