

ರಸ್ತೆ ಕಾಮಗಾರಿಯಿಂದಾಗಿ ಧೂಳಿನ ಸಮಸ್ಯೆ ಮುಂಡ್ಕೂರು- ಬೆಳ್ಮಣ್ ರಸ್ತೆ ಕಾಮಗಾರಿಯಿಂದ ಎದುರಾಗಿದ್ದು, ಈ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.
-ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬೆಳ್ಮಣ್‌ನಿಂದ ಮುಂಡ್ಕೂರಿಗೆ ಸಾಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯುದ್ದಕ್ಕೂ ಧೂಳು ಏಳುತ್ತಿರುವುದರಿಂದ ವಾಹನ ಸವಾರರಿಗೆ ಮತ್ತು ಪರಿಸರದ ಮನೆಗಳಿಗೆ ತೊಂದರೆಯಾಗುತ್ತಿದೆ.
ಮುಂಡ್ಕೂರು ಗ್ರಾಮದಿಂದ ಬೆಳ್ಮಣ್‌ವರೆಗಿನ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯನ್ನು ಸಂಪೂರ್ಣ ಅಗೆದು ಹಾಕಿ ನೂತನ ರಸ್ತೆ ನಿರ್ಮಾಣವಾಗುತ್ತಿದೆತ್ತಿದೆ. ಹೀಗಾಗಿ ಪರಿಸರವಿಡೀ ಧೂಳುಮಯವಾಗಿದೆ. ಕಾಮಗಾರಿ ನಡೆಸುವಾಗ ಒ.ದಷ್ಟು ನೀರಿ ಸಿಂಪಡಿಸುತ್ತಾರೆ. ಆದರೆ ಈ ಬಿರುಬೇಸಿಗೆಯಲ್ಲಿ ಅದು ಕ್ಷಣಾರ್ಧದಲ್ಲಿ ಒಣಗಿ ಧೂಳು ಏಳುತ್ತದೆ.
ವಿಪರೀತ ಧೂಳಿನಿಂದಾಗಿ ದ್ವಿಚಕ್ರ ಸವಾರರು ಓಡಾಡಲು ಇನ್ನಿಲ್ಲದ ಪಾಡು ಪಡಬೇಕಾಗುತ್ತದೆ. ರಸ್ತೆ ಪಕ್ಕದಲ್ಲಿರುವ ಮನೆ ಕಟ್ಟಡಗಳು ಧೂಳು ಆವರಿಸಿಕೊಂಡು ಕೆಂಪಾಗಿ ಕಾಣಿಸುತ್ತಿವೆ.ಲಾರಿ, ಬಸ್ಸಿನಂತಹ ದೊಡ್ಡ ವಾಹನಗಳು ಓಡಾಡುವ ಸಂದರ್ಭ ಭಾರಿ ಪ್ರಮಾಣದಲ್ಲಿ ಧೂಳು ಏಳುವುದರಿಂದ ಸಣ್ಣ ಪುಟ್ಟ ವಾಹನ ಸವಾರರು ಧೂಳಿನ ಅಭಿಷೇಕ ಮಾಡಿಕೊಳ್ಳುವಂತಾಗಿದೆ.
ದಿನಕ್ಕೆ ಒಂದೆರಡು ಬಾರಿ ನೀರು ಸಿಂಪಡಣೆ ಮಾಡುವ ಕೆಲಸ ಗುತ್ತಿಗೆದಾರರು ಮಾಡುತ್ತಿದ್ದಾರೆ. ವಿಪರೀತ ಬಿಸಿಲಿನ ಪರಿಣಾಮ ಕೆಲವೇ ನಿಮಿಷದಲ್ಲಿ ನೀರು ಆವಿಯಾಗಿ ಮತ್ತೆ ಅದೇ ಧೂಳಿನ ಸಮಸ್ಯೆಯನ್ನು ಈ ಭಾಗದಲ್ಲಿ ಸಂಚಾರ ನಡೆಸುವ ವಾಹನ ಸವಾರರ ಸಹಿತ ಪರಿಸರದ ಮನೆಗಳ ಮಂದಿ ಎದುರಿಸುವಂತಾಗಿದೆ. ವಿಪರೀತ ಧೂಳಿನಿಂದ ಮುಕ್ತಿಯನ್ನು ನೀಡಿ ಎಂದು ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿಯನ್ನು ಮಾಡಿಕೊಂಡರೂ ಸಮಸ್ಯೆ ಮಾತ್ರ ಇನ್ನೂ ನಿವಾರಣೆಯಾಗಿಲ್ಲ.
ಕಳೆದ ಎರಡು-ಮೂರು ತಿಂಗಳಿಂದ ಮುಂಡ್ಕೂರು, ನಾನಿಲ್ತಾರು, ಮುಲ್ಲಡ್ಕ, ಕೋಡಿಮಾರು, ಬೆಳ್ಮಣ್ ರಸ್ತೆಯಲ್ಲಿ ವಿಪರೀತ ಧೂಳಿನ ಸಮಸ್ಯೆಯುಂಟಾಗಿ ಪರಿಸರದ ಮನೆ ಮಂದಿಗೆ ಕೆಮ್ಮು-ದಮ್ಮಿನ ಸಮಸ್ಯೆಯುಂಟಾಗಿದೆ. ವೃದ್ಧರು, ಚಿಕ್ಕ ಮಕ್ಕಳಿಗೂ ಧೂಳಿನಿಂದ ಕೆಮ್ಮಿನ ಸಮಸ್ಯೆಯ ಜತೆಯಲ್ಲಿ ಅಲರ್ಜಿ ಸಮಸ್ಯೆ ಹೆಚ್ಚಾಗಿದೆ. ಪ್ರತಿ ನಿತ್ಯ ಕೆಮ್ಮಿನ ಸಮಸ್ಯೆಗೆ ಗ್ರಾಮದ ಜನರು ಆಸ್ಪತ್ರೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿನ ಅಭಾವ ಇರುವುದರಿಂದ ರಸ್ತೆಗೆ ಧಾರಾಳ ನೀರು ಸುರಿಯಲು ಸಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಈಗಾಗಲೇ ಣೆಕಟ್ಟೆ, ಬಾವಿ, ಕೆರೆಗಳೆಲ್ಲ ಒಣಗಿವೆ. ಕುಡಿಯುವ ನೀರಿಗೂ ಸಮಸ್ಯೆಯಿರುವುದರಿಂದ ರಸ್ತೆಗೆ ಸುರಿಯಲು ನೀರು ಸಿಗುವುದು ದುರ್ಲಭ. ಎಲ್ಲೆಲ್ಲಿಂದಲೋ ನೀರು ತಂದು ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರರೂ ಹರಸಾಹಸ ಪಡುತ್ತಿದ್ದಾರೆ. ಆದರೆ ಬಿಸಿಲ ಪರಿಣಾಮ ವಿಪರೀತ ಧೂಳಿನ ಸಮಸ್ಯೆಯಾಗಿ ನಿಧಾನವಾಗಿ ನಡೆಯುವ ಕಾಮಗಾರಿ ಕೂಡಲೇ ನಡೆದು ಪೂರ್ಣಗೊಂಡರೆ ಧೂಳಿನ ಸಮಸ್ಯೆ ದೂರವಾಗಬಹುದು ಎನ್ನುವುದು ಸ್ಥಳೀಯ ಗ್ರಾಮಸ್ಥರ ಮಾತು.
ಧೂಳಿನ ಸಮಸ್ಯೆಯಿಂದ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಬೈಕ್ ನಲ್ಲಿ ಹಾಗೂ ದಾರಿಯಲ್ಲಿ ನಡೆದುಕೊಂಡು ಹೋಗುವುದೇ ಅಸಾಧ್ಯವಾಗಿದೆ. ವಿಪರೀತ ಧೂಳಿನ ಸಮಸ್ಯೆಯಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. -ಸಂತೋಷ್, ಗ್ರಾಮಸ್ಥರು
ದೊಡ್ಡ ವಾಹನಗಳು ಮಾತ್ರವಲ್ಲದೆ ಕಾರು ಟೆಂಪೊಗಳು ಅತ್ತಿತ್ತ ಸಾಗಿದರೆ ಸಾಕು ಸಂಪೂರ್ಣ ಪರಿಸರ ಧೂಳಿನಿಂದ ಆವೃತ್ತವಾಗುತ್ತದೆ. ಬೈಕ್ ಸವಾರರಂತೂ ಈ ರಸ್ತೆಯಲ್ಲಿ ಓಡಾವುದೇ ಕಷ್ಟವಾಗಿದೆ. ಕೂಡಲೇ ಕಾಮಗಾರಿ ಮುಗಿದು ಧೂಳಿನ ಸಮಸ್ಯೆಯಿಂದ ನಮಗೆ ಮುಕ್ತಿ ನೀಡಿ.-ರಾಕೇಶ್ ಕುಮಾರ್ ಸ್ಥಳೀಯರು