

ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ಹೆಬ್ರಿ ತಾಲೂಕಿನ ಬೇಳಂಜೆ- ದೂಪದಕಟ್ಟೆ- ಹೊನ್ಕಲ್ ತನಕ ಅನೇಕ ಒಣಮರಗಳು ರಸ್ತೆಗೆ ಬಾಗಿಕೊಂಡು ಮಳೆಗಾಲದಲ್ಲಿ ಸಂಚಾರ ಮಾಡುವಾಗ ಜೀವ ಭಯ ತಂದೊಡುತ್ತಿದೆ. ವಿಪರೀತ ಗಾಳಿ ಮಳೆಗೆ ಆಗಾಗ ಅನೇಕ ಮರಗಳು ರಸ್ತೆಗೆ ಬೀಳುತ್ತಿವೆ.
ಹೆಬ್ರಿ ಹಾಗೂ ಕುಂದಾಪುರ ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದೆ. 20ರಿಂದ 25 ಮರಗಳು ಅಪಾಯಕಾರಿಯಾಗಿ ವಾಲಿಕೊಂಡಿವೆ. ಕೆಲವರು ವಿಪರೀತ ಗಾಳಿ ಮಳೆ ಆಗುವಾಗ ಈ ಮಾರ್ಗದಲ್ಲಿ ಸಂಚರಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಇದು ಅಪಾಯಕಾರಿ. ಅರಣ್ಯ ಇಲಾಖೆಯವರು ಇದರ ಗೋಜಿಗೆ ಹೋಗುತ್ತಿಲ್ಲ. ಅನಾಹುತ ಆಗುವ ಮೊದಲು ಕ್ರಮ ಕೈಗೊಳ್ಳಿ ಎಂದು ಜನ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಕೆಲವು ಸಮಯದ ಹಿಂದೆ ಕುಂದಾಪುರ ಕಡೆಯಿಂದ ಬೈಕ್‌ನಲ್ಲಿ ಬೇಳಂಜೆ ಬರುತ್ತಿರುವಾಗ ವಿಪರೀತ ಗಾಳಿ ಮಳೆಗೆ ಮರ ಬಿದ್ದು ಬೆಳಂಜೆಯ ಯುವಕನೊಬ್ಬ ನಿಧನ ಹೊಂದಿದ್ದ.
ಸಳ್ಳೆಕಟ್ಟೆ ಶಾಸ್ತ್ರಿ ನಗರದಿಂದ ದೂಪದ ಕಟ್ಟೆ ತನಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಅನೇಕ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದು ಸಾಗುತ್ತಾರೆ. ಗಾಳಿ ಮಳೆಗೆ ಮರಗಳು ಅಲ್ಲಾಡುವುದು ನೋಡಿದರೆ, ಯಾರಿಗಾದರೂ ಒಂದೊಮ್ಮೆ ದಿಗ್ಭ್ರಮೆಯಾಗುತ್ತದೆ. ಮಕ್ಕಳ ಹಿತಾದೃಷ್ಟಿಯಿಂದ ಸಂಬಂಧಪಟ್ಟವರು ಶೀಘ್ರ ಮರ ತೆರವು ಮಾಡಬೇಕಾಗಿದೆ.
ಅಪಾಯಕಾರಿ ಮರ ತೆರವಿನ ಬಗ್ಗೆ, ಗ್ರಾಪಂ, ತಾಪಂ ಹಾಗೂ ಜಿಲ್ಲಾ ಮಟ್ಟದ ಸಭೆಯಲ್ಲಿ ಗಮನಸೆಳೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಅರಣ್ಯ ಇಲಾಖೆ ಒಂದೆರಡು ಬಾರಿ ನೋಡಿ ಹೋಗಿ ಏನು ಕ್ರಮ ಜರುಗಿಸಿಲ್ಲ. ಇವರ ಬೇಜವಾಬ್ದಾರಿತನಕ್ಕೆ ನಾವು ಜೀವ ಕಳೆದುಕೊಂಡಿದ್ದೇವೆ. ಈ ಸಲ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಕುಚ್ಚೂರು ಗ್ರಾಪಂ ವ್ಯಾಪ್ತಿಯ ಬೇಳಂಜೆಯಿಂದ ಹೊನ್ಕಲ್ ತನಕ ಹಲವಾರು ಒಣಗಿದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಗೆ ವಾಲಿಕೊಂಡಿದೆ. ಕುಚ್ಚೂರು ದ್ವಿತೀಯ ಶಾಲೆಯ ಎದುರುಗಡೆ ದೊಡ್ಡ ದೂಪದ ಮರ ಬುಡದಲ್ಲಿ ಕೆಟ್ಟು ಹೋಗಿದೆ. ಶಾಲಾ ವಿದ್ಯಾರ್ಥಿಗಳು ಇಲ್ಲೇ ಸಮೀಪ ಬಸ್ಸಿಗಾಗಿ ಕಾಯುತ್ತಾರೆ. ಸಂಬಂಧಪಟ್ಟವರು ಸೂಕ್ತ ಕ್ರಮ ಜರುಗಿಸಬೇಕು.-ಸತೀಶ್ ಪೂಜಾರಿ ಬೈಲುಮನೆ ಕುಚ್ಚೂರು ಗ್ರಾಪಂ ಸದಸ್ಯ
ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಸ್ಥಳ ತನಿಖೆ ಮಾಡಿ. ಸೂಕ್ತ ಕ್ರಮ ಜರುಗಿಸಲಾಗುವುದು. ಶಾಲೆ ಬಳಿ ಇರುವ ಅಪಾಯಕಾರಿ ಮರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.-ಸಿದ್ದೇಶ್ವರ, ಹೆಬ್ರಿ ವಲಯ ಅರಣ್ಯಾಧಿಕಾರಿ