

ರಾಮನಗರ: ಬಹುಶಃ ಮಟಮಟ ಮಧ್ಯಾಹ್ನವಾದ ಕಾರಣ ಯಮರಾಜ ವಿಶ್ರಾಂತಿ ಪಡೆದಿದ್ದ ಅನಿಸುತ್ತದೆ. ಈ ಕಾರಣದಿಂದ ಘೋರ ದುರಂತವೊಂದು ತಪ್ಪಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ನಡೆದಿದೆ.
ಮೈಸೂರು ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಕಂಟೇನರ್ ಲಾರಿಯೊಂದು ಚಾಲಕನನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ದಾಟಿ ಸರ್ವೀಸ್ ರೋಡ್ಗೆ ನುಗ್ಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಸಮೀಪದ ಸಂಕಲಗೆರೆ ಗೇಟ್ ಬಳಿ ನಡೆದಿದೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ, ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ರಸ್ತೆ ವಿಭಜಕವನ್ನು ದಾಟಿ ಸರ್ವೀಸ್ ರಸ್ತೆಗೆ ನುಗ್ಗಿದೆ. ಸಮೀಪ ಇದ್ದ ಅಂಗಡಿಯೊಂದರ ಸಿಸಿಟಿವಿಯಲ್ಲಿ ಘೋರ ದೃಶ್ಯ ಸೆರೆಯಾಗಿದೆ.
ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಘೋರ ದುರಂತ ತಪ್ಪಿದಂತಾಗಿದೆ. ವಾಹನ ಎಡಭಾಗದಿಂದ ಬಲಭಾಗಕ್ಕೆ ರಭಸದಿಂದ ನುಗ್ಗಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.