

ಬೆಂಗಳೂರು: ಕುಡಿದು ಅಮಲಿನಲ್ಲಿ ಕಾರು ಚಲಾಯಿಸಿದ್ದಲ್ಲದೆ, ಪರಿಶೀಲನೆಗೆಂದು ತಡೆದಿದ್ದ ಪೊಲೀಸರನ್ನೇ ಪ್ರಶ್ನಿಸಿ, ಅವರಿಗೆ ಕಾರು ಗುದ್ದಿಸಿ ಮದ್ಯಪಾನಿಯೊಬ್ಬ ಪರಾರಿಯಾಗಿದ್ದಾನೆ. ಬೆಂಗಳೂರಿನ ಎಚ್ಎಎಲ್ ಮುಖ್ಯರಸ್ತೆಯಲ್ಲೇ ಈ ಪ್ರಕರಣ ನಡೆದಿದೆ.
ನಿನ್ನೆ ಬೆಳಗಿನ ಜಾವ ಡ್ರಂಕ್ ಆ್ಯಂಡ್ ಡ್ರೈವ್ ಪರಿಶೀಲನೆ ನಡೆಸುತ್ತಿದ್ದ ಹಳೇ ವಿಮಾನ ನಿಲ್ದಾಣ ಸಂಚಾರ ಪೊಲೀಸರು, ಯಮಲೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕೆಎ 01 ಎಂಎಸ್ 3772 ನೋಂದಣಿಯ ಹ್ಯುಂಡೈ ಕ್ರೆಟಾ ಕಾರು ತಡೆದಿದ್ದರು. ಆಗ ಅದನ್ನು ಚಲಾಯಿಸುತ್ತಿದ್ದ ವ್ಯಕ್ತಿ, 'ನಾನ್ಯಾರು ಗೊತ್ತಾ, ನನ್ನ ಕಾರು ತಡೆಯಲು ಯಾರು ಹೇಳಿದ್ದು?' ಎಂದು ಪೊಲೀಸರನ್ನೇ ಏರುದನಿಯಲ್ಲಿ ಪ್ರಶ್ನಿಸಿದ್ದಾನೆ.
ಮಾತ್ರವಲ್ಲ ಹೆಡ್ ಕಾನ್ಸ್ಟೆಬಲ್ ಮುಬಾರಕ್ ಅಲಿ ಎಂಬವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರಿಗೆ ಕಾರಿನಿಂದ ಗುದ್ದಿಸಿ ಮುಂದಕ್ಕೆ ಹೋಗಿದ್ದಾನೆ. ಪೊಲೀಸ್ಗೆ ಕಾರು ಗುದ್ದಿಸಿ ಪರಾರಿ ಆಗುವ ವೇಳೆ ರಸ್ತೆ ಬದಿಯ ಗೋಡೆಗೂ ಕಾರು ಡಿಕ್ಕಿಯಾಗಿದೆ. ಹೆಡ್ ಕಾನ್ಸ್ಟೆಬಲ್ ಮುಬಾರಕ್ ಅಲಿ ಎಡಗಾಲಿನ ಮಂಡಿ, ಮೊಣಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ರಾಮಾಂಜುಲು ಎಂಬಾತನನ್ನು ಬಂಧಿಸಿರುವ ಪೊಲೀಸರು, ಎಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಕೊಲೆ ಯತ್ನ ಕೇಸ್ ದಾಖಲಿಸಿದ್ದಾರೆ.