

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ ಅಭಿವೃದ್ಧಿ, ಸಂಸ್ಥೆಗಳಿಗೆ ಸ್ವಾಯತ್ತತೆ ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿರುವ ಕಾರಣ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಬೇಡಿ ಎಂದು ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಮಾಜಿ ಸಲಹೆಗಾರ ಡಾ. ಎಂ.ಆರ್. ದೊರೆಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಶಿಕ್ಷಣ ನೀತಿಗಳು ಒಂದು ಸರ್ಕಾರ ಅಥವಾ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಕೇಂದ್ರ ಸರ್ಕಾರವು ನೀತಿಯನ್ನು ಜಾರಿಗೊಳಿಸಿದ್ದು, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಸರ್ಕಾರ ಕೂಡ ಒಪ್ಪಬೇಕಾಗುತ್ತದೆ ಎಂದು ಬ್ಯಾಟಿಂಗ್ ಮಾಡಿದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಎನ್‌ಇಪಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರೂ ತಿರಸ್ಕರಿಸುವುದು ಸರಿಯಲ್ಲ. ಇಲ್ಲಿಯವರೆಗೂ ಶಿಕ್ಷಣ ಸಂಸ್ಥೆಗಳು ತನ್ನ ಕಾಲೇಜಿನಲ್ಲಿರುವ ಸಂಯೋಜನೆಗಳಿಗೆ ಸರ್ಕಾರದಿಂದ ಒಪ್ಪಿಗೆ ಪಡೆಯುವುದು ಮೆಕಾಲೆ ಶಿಕ್ಷಣ ಪದ್ಧತಿಯಾಗಿದೆ. ಇಂಗ್ಲೆಂಡಿನಲ್ಲಿ ಬ್ರಿಟಿಷರಿಗೆ ಬೇಡವಾದ ಪದ್ಧತಿ ಭಾರತದಲ್ಲಿ ಏಕಿದೆ? ಇಂತಹ ಸಮಸ್ಯೆಗಳಿಗೆ ಎನ್‌ಇಪಿ ಯಲ್ಲಿ ಪರಿಹಾರವಿದೆ ಎಂದರು.