ಪೊಲೀಸರ ಕಟ್ಟುಕಟ್ಟಿನ ಕ್ರಮವೇ ಸಾವು ತಂದಿತಾ?; ಎದೆನೋವಿದ್ದ ಮಹಿಳೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮರಣ

Lady
Published on

ಕಾರ್ಕಳ: ಲಾಕ್​ಡೌನ್​ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ವಿನಾಕಾರಣ ಬೀದಿಗಿಳಿದವರಿಗೆ ಲಾಠಿ ಏಟು ಬೀಳುತ್ತಿದ್ದು, ಅವರ ವಾಹನಗಳ ಜಪ್ತಿಯೂ ನಡೆಯುತ್ತಿದೆ. ಆದರೆ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದಲೇ ಇಲ್ಲೊಬ್ಬರು ಸಾವಿಗೀಡಾಗಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ತೀವ್ರ ಎದೆನೋವಿಗೆ ಒಳಗಾಗಿದ್ದ ಮಹಿಳೆ ಮಂಜುಳಾ ಎಂಬಾಕೆಯನ್ನು ಸಂಬಂಧಿಕರು ವಾಹನದಲ್ಲಿ ಕರೆಯುತ್ತಿದ್ದಾಗ, ಮಾರ್ಗಮಧ್ಯೆ ಚೆಕ್​ಪೋಸ್ಟ್​ನಲ್ಲಿ ತಡೆದಿದ್ದು, ಖಾಸಗಿ ವಾಹನಕ್ಕೆ ಪ್ರವೇಶವಿಲ್ಲ, ಬೇಕಿದ್ದರೆ ಆಂಬುಲೆನ್ಸ್​ನಲ್ಲಿ ಕರೆದೊಯ್ಯಿರಿ ಎಂದಿದ್ದಾರೆ. ಹೀಗಾಗಿ ಅಲ್ಲಿಂದ ಹಿಂದಕ್ಕೆ ಬಂದ ಸಂಬಂಧಿಕರು ಬೇರೊಂದು ಒಳದಾರಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಡವಾದ್ದರಿಂದ ಮಹಿಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಮಂಜುಳಾ ಮೃತಪಟ್ಟವರು. ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಬಜಗೋಳಿ ಸಮೀಪದ ಚೆಕ್​ಪೋಸ್ಟ್​ನಲ್ಲಿ ವಾಹನ ತಡೆದ ಪೊಲೀಸರು ಅಲ್ಲಿಂದ ಮುಂದಕ್ಕೆ ಸಾಗಲು ಅವಕಾಶ ನೀಡಿರಲಿಲ್ಲ. ಕೊನೆಗೆ ಒಳದಾರಿಯಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪೊಲೀಸರ ಅಸಹಕಾರದಿಂದ ಸಾವು ಸಂಭವಿಸಿದೆ ಎಂದು ಸಂಬಂಧಿಕರು ಆರೋಪಿಸಿದ್ದು, ಆ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net