

ಬೆಂಗಳೂರು: ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸುವಂತೆ ಆಗ್ರಹಿಸಿ, ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಕೆಲವೆಡೆ ಅದು ಹಿಂಸಾಚಾರಕ್ಕೂ ತಿರುಗಿದೆ. ಈ ಕುರಿತ ಪ್ರತಿಭಟನೆ ರಾಜಧಾನಿ ಬೆಂಗಳೂರಿನಲ್ಲೂ ನಡೆಯಲಿದೆಯೇ ಎಂಬ ಪ್ರಶ್ನೆ ಇದೀಗ ಹಲವರನ್ನು ಕಾಡಲಾರಂಭಿಸಿದೆ.
ನೂಪುರ್ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಖ್, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾಗಿ ಧರ್ಮಗುರು ಮುಲಾನಾ ಮಕ್ಸೂದ್ ಇಮ್ರಾನ್ ಹೇಳಿಕೊಂಡಿದ್ದಾರೆ. ನೂಪುರ್ ಶರ್ಮಾ ಹೇಳಿಕೆ ನಮಗೆಲ್ಲ ನೋವುಂಟು ಮಾಡಿದೆ ಎಂದು ಹೇಳಿದ್ದು, ಎಲ್ಲರೂ ಜತೆಯಾಗಿ ಇಂದು ಪೊಲೀಸ್ ಆಯುಕ್ತರನ್ನೂ ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಯಾವ ಧರ್ಮದಲ್ಲಿ ಯಾರು ಮುಖ್ಯರಿರುತ್ತಾರೋ ಅವರ ಮೇಲೆ ಟಿಪ್ಪಣಿ ಮಾಡಬಾರದು. ನಮ್ಮ ಮುಸಲ್ಮಾನ ಮೌಲ್ವಿಗಳ ಆಗ್ರಹ ಒಂದೇ. ವಿವಾದಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಜರುಗಬೇಕು. ಅದಕ್ಕಾಗಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದಿರುವ ಅವರು ನಾವು ಬೀದಿಯಲ್ಲಿ ಪ್ರತಿಭಟನೆ ಮಾಡುವುದಿಲ್ಲ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೂಡ ಹೇಳಿಕೆ ನೀಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಗಲಾಟೆಗಳು ನಡೆಯುತ್ತಿವೆ. ಹೀಗಾಗಿ ಸಿಎಂ, ಗೃಹಸಚಿವರು ಸೂಚನೆ ಕೊಟ್ಟಿದ್ದರು. ಮುಸ್ಲಿಂ ಮುಖಂಡರ ಜೊತೆಗೆ ಸಭೆ ನಡೆಸಿ ಪ್ರತಿಭಟನೆ ಮಾಡದಂತೆ ಸೂಚನೆ ನೀಡಿದ್ದೇವೆ. ಅವರು ಕೂಡ ಪ್ರತಿಭಟನೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ಸದ್ಯಕ್ಕೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದ ತಿಳಿಸಿದ್ದಾರೆ.