ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

Murder
Published on

ಬೆಂಗಳೂರು: ರಾಜಧಾನಿಯಲ್ಲಿ ಇಂದು ಹಾಡಹಗಲೇ ಕೊಲೆಗೀಡಾಗಿರುವ ದಂಪತಿ ಕುರಿತು ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದ್ದು, ಅವರನ್ನು ಪರಿಚಿತರೇ ಕೊಂದರಾ? ಎಂಬುದೊಂದು ಅನುಮಾನ ಕೂಡ ಉಂಟಾಗಿದೆ.

ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಕಾಶಿನಗರದ ಶಾಂತರಾಜು-ಪ್ರೇಮಲತಾ ದಂಪತಿ ಕೊಲೆಗೀಡಾಗಿದ್ದು, ಶಾಂತರಾಜು ಸಾರಿಗೆ ಸಂಸ್ಥೆಯ ನಿವೃತ್ತ ಉದ್ಯೋಗಿ ಎಂಬುದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಕೂಡ ಆಗಮಿಸಿದ್ದು, ವ್ಯಾಪಕ ಪರಿಶೀಲನೆ ನಡೆದಿದೆ. ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಕೂಡ ಭೇಟಿ ನೀಡಿದ್ದಾರೆ.

ಇಬ್ಬರನ್ನೂ ಪ್ರತ್ಯೇಕ ಕೊಠಡಿಯಲ್ಲಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಕುತ್ತಿಗೆ ಕೊಯ್ದು, ಚಾಕುವಿನಿಂದ ಇರಿದಿದ್ದರು. ಮಹಿಳೆಯ ಶವದ ಪಕ್ಕ ಕೇಬಲ್​ ಕೂಡ ಪತ್ತೆಯಾಗಿದ್ದು, ಕೊಲೆಗೆ ಕೇಬಲನ್ನೂ ಬಳಸಿರಬಹುದು ಎಂಬ ಶಂಕೆ ಕೂಡ ಉಂಟಾಗಿದೆ. ಇನ್ನು ಕೂಗಾಟದ ಚೀರಾಟದ ಸದ್ದು ಕೇಳದಂತೆ ದಿಂಬನ್ನು ಬಳಸಿರುವ ಸಾಧ್ಯತೆಯೂ ಇದೆ ಎಂದು ಶಂಕಿಸಿರುವ ಪೊಲೀಸರು, ದುಷ್ಕರ್ಮಿಗಳು ಹತ್ಯೆಗೆ ಬಳಸಿದ ಅಸ್ತ್ರದೊಂದಿಗೇ ಪರಾರಿ ಆಗಿರಬಹುದು ಎಂದು ಅಂದಾಜಿಸಿದ್ದಾರೆ.

ಅಲ್ಲದೆ ಮನೆಯೊಳಗೆ ಟೇಬಲ್ ಮೇಲೆ ಮೂರು ಟೀ ಕಪ್​ ಕಾಣಿಸಿಕೊಂಡಿದ್ದು, ಯಾರೋ ಪರಿಚಯಸ್ಥರೇ ಬಂದು ಕೊಲೆ ಮಾಡಿರಬಹುದಾ ಎಂಬ ಅನುಮಾನದ ಹಿನ್ನೆಲೆಯಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮನೆಯೊಳಗಿನ ಬೀರು ಕೂಡ ತೆರೆಯಲಾಗಿದ್ದು, ಹಣ-ಚಿನ್ನಾಭರಣ ದೋಚಿಕೊಂಡು ಹೋಗಿರುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಕೊಲೆಗೀಡಾದ ದಂಪತಿಗೆ ಮಕ್ಕಳಿಲ್ಲ. ಒಬ್ಬಳು ಸಾಕುಮಗಳು ಇದ್ದಾಳೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಈ ಮೊದಲು ಬಾಡಿಗೆ ಮನೆಯಲ್ಲಿದ್ದವರ ಮಗಳನ್ನೇ ಮಗಳು ಎನ್ನುತ್ತಿದ್ದ ಈ ದಂಪತಿ, ಕೆಲ ವರ್ಷಗಳ ಬಳಿಕ ಬೇರೆಡೆ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಆ ನಂತರವೂ ಬಾಡಿಗೆಗೆ ಇದ್ದ ಆ ಮನೆಯವರ ಮಗಳು ಬಂದು ಹೋಗುತ್ತಿದ್ದಳು. ಆಕೆ ಕೂಡ ಈ ದಂಪತಿಯನ್ನು ಅಪ್ಪ-ಅಮ್ಮ ಎಂದೇ ಕರೆಯುತ್ತಿದ್ದಳು ಎಂಬ ವಿಷಯ ಇದೀಗ ಹೊರಬಂದಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕೂಡ ಭೇಟಿ ನೀಡಿದ್ದು, ಪರಿಶೀಲನೆ ಹಾಗೂ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net