

ಬೆಂಗಳೂರು: ಈವರೆಗೆ ಜ್ವರ, ಕೆಮ್ಮು, ನೆಗಡಿ, ಗಂಟಲುನೋವು, ಉಸಿರಾಟದ ತೊಂದರೆ ಮುಂತಾದವು ಕರೊನಾ ಸೋಂಕಿನ ಲಕ್ಷಣಗಳು ಎಂದು ವೈದ್ಯರು ಹೇಳುತ್ತಿದ್ದರು. ಇತ್ತೀಚೆಗೆ ರುಚಿ ಮತ್ತು ವಾಸನೆಯ ಶಕ್ತಿ ಕಳೆದುಕೊಳ್ಳುವುದು ಕೂಡ ಇದರ ಲಕ್ಷಣವೇ ಎಂಬ ವಾದವನ್ನು ಸಂಶೋಧಕರು ಮುಂದಿಟ್ಟಿದ್ದರು. ಇದೀಗ ಇನ್ನೊಂದು ಲಕ್ಷಣವೂ ಇದಕ್ಕೆ ಹೊಸದಾಗಿ ಸೇರಿಕೊಂಡಿದೆ. ಕಾರಣಗಳಿಲ್ಲದೆ ಮೈಕೈ ನೋವಾಗುವುದು, ವಿಪರೀತ ತಲೆ ನೋವು ಬರುವುದು ಕೂಡ ಕರೊನಾದ ಲಕ್ಷಣಗಳೇ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಕೋವಿಡ್ ಟಾಸ್ಕ್ ಫೋರ್ಸ್‌ನಲ್ಲಿರುವ ತಜ್ಞ ವೈದ್ಯರೇ ಇದನ್ನು ದೃಢಪಡಿಸಿದ್ದು, ಈ ರೀತಿಯ ಲಕ್ಷಣ ಇರುವವರು ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಸಾಧ್ಯವಾದರೆ ಕರೊನಾ ಪರೀಕ್ಷೆಯನ್ನೂ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ! ಈಗಾಗಲೇ ಕರೊನಾ ಹಾವಳಿಯಿಂದ ತೀವ್ರ ಚಿಂತಿತರಾಗಿರುವ ಸಾರ್ವಜನಿಕರಿಗೆ ಈ ಸುದ್ದಿ ಮತ್ತೊಂದು ಬರಸಿಡಿಲಿನಂತೆ ಬಂದೆರಗಿದೆ. ಇದನ್ನೂ ಓದಿ: ಕರೊನಾ ಗುಟ್ಟು ಬಚ್ಚಿಡಲು ಚೀನಾದಿಂದ ಅಬ್ಬಾ ಇದೆಂಥ ಕೃತ್ಯ… ಇಲ್ಲಿದೆ ಸ್ಫೋಟಕ ಮಾಹಿತಿ
ಎರಡು ದಿನಗಳ ಹಿಂದಷ್ಟೆ ಜಗತ್ತಿನ ವಿವಿಧ ರಾಷ್ಟ್ರಗಳ 239 ವಿಜ್ಞಾನಿಗಳು ‘‘ಗಾಳಿಯಲ್ಲೂ ಕರೊನಾ ಹರಡುವ ಸಾಧ್ಯತೆ ಅಧಿಕವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಾರ್ಗಸೂಚಿಯಲ್ಲಿ ಇದನ್ನು ಸೇರಿಸಿಕೊಳ್ಳಬೇಕು’’ ಎಂದು ಆಗ್ರಹಿಸಿದ್ದರು. ಇದರ ಬಗ್ಗೆ ಪರಿಶೀಲಿಸಿದ ವಿಶ್ವ ಆರೋಗ್ಯ ಸಂಸ್ಥೆ, ‘ಕರೊನಾ ಗಾಳಿಯಲ್ಲೂ ಹರಡುವ ಸಾಧ್ಯತೆ ಇದೆ’ ಎಂಬುದನ್ನು ನಿನ್ನೆಯಷ್ಟೇ ದೃಢೀಕರಿಸಿದೆ. ಈಗ ತಲೆನೋವು, ಮೈಕೈ ನೋವು ಕೂಡ ಕರೊನಾದ ಲಕ್ಷಣಗಳು ಎಂಬುದನ್ನು ವೈದ್ಯರೇ ದೃಢಪಡಿಸಿರುವುದು ಮತ್ತಷ್ಟು ಚಿಂತೆಗೆ ಕಾರಣವಾಗಿದೆ.