ಮಾಜಿ ಮೇಯರ್​ ಸಂಪತ್​ರಾಜ್​ ಜೈಲಿಗೆ ಶಿಫ್ಟ್​

Sampathraj
Published on

ಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ಮಾಜಿ ಮೇಯರ್​, ಕಾಂಗ್ರೆಸ್​ ಮುಖಂಡ ಸಂಪತ್​ರಾಜ್​ ಅವರನ್ನು ಜೈಲಿಗೆ ಶಿಫ್ಟ್​ ಮಾಡಲಾಗಿದೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರ ಗಲಭೆಯಲ್ಲಿ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸಂಪತ್​ರಾಜ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 67ನೇ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಲಯ ಆದೇಶಿಸಿದೆ.

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಂಪತ್​ರಾಜ್​ರನ್ನು ಸಿಸಿಬಿ ಪೊಲೀಸರು ನ.15ರಂದು ಬಂಧಿಸಿದ್ದರು. ಮೂರು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಕಾತ್ಯಾಯಿನಿ, 24ರವರೆಗೆ ಸಂಪತ್​ರಾಜ್​ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್​, ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಪ್ರಕಟಿಸಿದ ವಿಚಾರಕ್ಕೆ ಉದ್ರಿಕ್ತ ಗುಂಪೊಂದು ಆ.11ರ ರಾತ್ರಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಗಲಭೆ ಎಬ್ಬಿಸಿತ್ತು. ಇದೇ ವೇಳೆ ಅಖಂಡ ಮನೆಗೆ ಬೆಂಕಿ ಹಚ್ಚಿಸಿರುವ ಆರೋಪ ಸಂಪತ್​ರಾಜ್​ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ತನಗೆ ಅನಾರೋಗ್ಯ ಎಂದು ಆಸ್ಪತ್ರೆ ಸೇರಿದ್ದ ಸಂಪತ್​ರಾಜ್​, ಬಳಿಕ ನಾಪತ್ತೆಯಾಗಿದ್ದರು.

ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್​ರಾಜ್​ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್​ಐಎ) ಕೋರ್ಟ್​ ಅನುಮತಿ ನೀಡಿದೆ. ನ. 23 ಮತ್ತು 24ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ವಿಚಾರಣೆ ನಡೆಸುವಂತೆ ಎನ್​ಐಎ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ, ಸಂಪತ್​ರಾಜ್​ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ವಿಚಾರಣೆಯನ್ನು 24ಕ್ಕೆ ಮುಂದೂಡಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿಗೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net