ಡಿಜೆ ಹಳ್ಳಿ ಗಲಭೆ: ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಸುಳಿವು ಸಿಕ್ಕಿದೆ...

DJhalli
Published on

ಬೆಂಗಳೂರು: ಡಿ.ಜೆ.ಹಳ್ಳಿ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುತ್ತೆ ಎಂದು ಗೃಹ ಸಚಿವ‌ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧ‌ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದೇಶ ಬಿಟ್ಟು ಪರಾರಿಯಾಗದಂತೆ ತಡೆಯಲು ಲುಕ್ ಔಟ್ ನೊಟೀಸ್ ಜಾರಿಗೊಳಿಸಲಾಗಿದೆ. ಆದಷ್ಟು ಬೇಗವೇ ಸಂಪತ್​ ರಾಜ್​ನನ್ನು ಬಂಧಿಸುವುದು ನಿಶ್ಚಿತ ಎಂದರು.

ಸಂಪತ್ ರಾಜ್ ಎಲ್ಲಿಯೂ ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುವುದಾದರೆ, ಬೇಗ ಒಪ್ಪಿಸಿಬಿಡಲಿ. ಪೊಲೀಸರ ಕೆಲಸ ಹಗುರವಾಗುತ್ತದೆ, ಹುಡುಕುವುದೂ ತಪ್ಪುತ್ತದೆ ಎಂದು ಬಸವರಾಜ ಬೊಮ್ಮಾಯಿ ಕುಟುಕಿದರು. ಸಂಪತ್ ರಾಜ್ ಬಗ್ಗೆ ಸುಳಿವು ಸಿಕ್ಕಿದ್ದು, ಅವರನ್ನು ಪೊಲೀಸರು ಶೀಘ್ರ ಪತ್ತೆ ಹಚ್ಚಿ ಬಂಧಿಸಲಿದ್ದಾರೆ ಎಂದರು.

ಹಸಿರು ದೀಪಾವಳಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿತ ಜಾಥಾಕ್ಕೆ ವಿಧಾನಸೌಧ ಮುಖ್ಯ ದ್ವಾರದ ಮೆಟ್ಟಿಲು ಬಳಿ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕರೊನಾ ನಿಯಂತ್ರಣ, ಸಾರ್ವಜನಿಕರ ಆರೋಗ್ಯದ ಹಿತ‌ ಹಾಗೂ ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ಜಾಥಾ ಹಮ್ಮಿಕೊಂಡಿದ್ದು, ಹೊಸ ವರ್ಷಾಚರಣೆ‌ ಸಂಬಂಧ ಇಷ್ಟರಲ್ಲೇ ಸಭೆ ಕರೆದು ಚರ್ಚಿಸಿ, ಯೋಜಿತ ಕ್ರಮಗಳ ಕುರಿತು ತೀರ್ಮಾನಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ‌ ದಳ, ಪೌರ ರಕ್ಷಣೆ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ ಜಂಟಿಯಾಗಿ ಈ ಜಾಥಾ ಏರ್ಪಡಿಸಿದ್ದು, ಪ್ರಮುಖ ವೃತ್ತ, ರಸ್ತೆಗಳ ಮೂಲಕ ಸಾಗಿ ಬಸವನಗುಡಿ ನ್ಯಾಷನಲ್ ಕಾಲೇಜುವರೆಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net