

ಪುತ್ತೂರು ಗ್ರಾಮಾಂತರ: ಇಂದು ಸರ್ಕಾರಿ ಶಾಲೆಗಳೆಂದರೆ ಯಾರಿಗೂ ಬೇಡವಾಗಿದೆ. ಇಂತಹ ಸಂದರ್ಭದಲ್ಲೂ ಅಜ್ಜಿಕಲ್ಲು ಸರ್ಕಾರಿ ಶಾಲೆಯಲ್ಲಿ 80ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಬರೆಯುವ ಪುಸ್ತಕವನ್ನು ನೀಡಲು ದಾನಿಗಳು ಸಹಕರಿಸಿದ್ದಾರೆ ಎಂದು ಒಳಮೊಗ್ರು ಗ್ರಾಪಂ ಸದಸ್ಯ ಮಹೇಶ್ ಕೇರಿ ಹೇಳಿದರು.
ಹಸಿರು ಅಭ್ಯುದಯ ಪ್ರಶಸ್ತಿ ಪುರಸ್ಕೃತ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಏಕತ್ತಡ್ಕ ಶಾಲೆಯಲ್ಲಿ ದಾನಿಗಳ ಸಹಕಾರದೊಂದಿಗೆ ಪುಸ್ತಕ, ಊಟದ ತಟ್ಟೆ, ಲೋಟ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ನಾಯ್ಕ ಮುಂಡೋವುಮೂಲೆ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಸಂದೀಪ್ ರೈ ಚಿಲ್ಮೆತ್ತಾರು, ಜಯಂತಿ ರೈ ನಾಯಿಲ ಹೊಸಮನೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಜ್ಯೋತಿ ಕಳೆಂಜಿಲ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಚಿತ್ರಾ ರೈ ಪ್ರಾಸ್ತಾವಿಕ ಮಾತನಾಡಿದರು. ಅತಿಥಿ ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿದರು. ಸಹಶಿಕ್ಷಕ ಪ್ರೀತಂ ವಂದಿಸಿದರು. ಗೌರವ ಶಿಕ್ಷಕ ವಿಪಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.