

ಬೆಂಗಳೂರು : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಬೃಂದಾವನ ಗಾರ್ಡನ್ ಅನ್ನು ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಹು ಚರ್ಚಿತ ವಿಷಯ. ಸರ್ಕಾರ ಉರುಳಿದಂತೆ ಯೋಜನೆ ಕೂಡ ಹಳ್ಳ ಹಿಡಿದಿತ್ತು. ಇದೀಗ ಪುನಃ ಆ ಯೋಜನೆಯ ಆರಂಭಕ್ಕೆ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿ ಕೆ.ಆರ್.ಎಸ್. ಬೃಂದಾವನ ಗಾರ್ಡನ್ಸ್ಅನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಮಹತ್ವದ ಸಭೆ ನಡೆಯುತ್ತಿದೆ. ಈ ಯೋಜನೆಯು 2 ಸಾವಿರ ಕೋಟಿ ರೂ. ಮೊತ್ತದ್ದಾಗಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವು ಚಟುವಟಿಕೆಗಳನ್ನು ಒಂದೇ ಸೂರಿನಡಿ ಪಿಪಿಪಿ ಮಾದರಿಯಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಲಾಗಿದೆ. ಮೈಸೂರು ನಗರದಿಂದ 12 ಕಿಲೋಮೀಟರ್ ದೂರದಲ್ಲಿರುವ ಈ ಪ್ರವಾಸಿ ಸ್ಥಳವನ್ನು ಮತ್ತಷ್ಟು ಆಕರ್ಷಣೆಯ ಸ್ಥಳವಾಗಿಸುವ ಚಿಂತನೆ ನಡೆದಿದೆ.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಬಗ್ಗೆ ಪ್ರಸ್ತಾಪವಾಗಿತ್ತು. ಪರ ವಿರೋಧವೂ ವ್ಯಕ್ತವಾಗಿತ್ತು. ಆಗ ಸಚಿವರಾಗಿದ್ದ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ಅವರು, ಕೆಆರ್ಎಸ್ಗೆ ತೆರಳಿ ಯೋಜನೆ ಜಾರಿ ಕುರಿತು ಸಭೆಯನ್ನೂ ನಡೆಸಿದ್ದು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ