ಠಾಣೆಗೆ ಭೇಟಿ ನೀಡುವಂತೆ ಡಿಸಿಪಿ-ಎಸ್‌ಪಿಗೆ ಡಿಜಿಪಿ ಡಾ.ಅಲೋಕ್ ಮೋಹನ್ ಕಟ್ಟಾಜ್ಞೆ

alok mohan
Published on

ಬೆಂಗಳೂರು: ಪೊಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ಸಿಬ್ಬಂದಿ ಮತ್ತು ಜನರ ಸಮಸ್ಯೆಗಳನ್ನು ಆಲಿಸುವಂತೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅವರಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಸೂಚಿಸಿದ್ದಾರೆ.

ಪ್ರತಿ ಡಿಸಿಪಿ/ಎಸ್​ಪಿ ಅವರು ವಿವಿಐಪಿ ಭದ್ರತೆ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅಂದರೆ ತಿಂಗಳಲ್ಲಿ ಒಮ್ಮೆಯಾದರೂ ತಮ್ಮ ವ್ಯಾಪ್ತಿಯ ಠಾಣೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಅಲ್ಲಿನ ಕಾರ್ಯವೈಖರಿ, ಠಾಣೆಗೆ ಭೇಟಿ ನೀಡುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಒದಗಿಸಬೇಕು.

ಅಲ್ಲದೆ, ಠಾಣಾಧಿಕಾರಿ, ಪಿಎಸ್‌ಐ, ಎಎಸ್‌ಐ, ಹೆಡ್‌ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್‌ಗಳ ಕಷ್ಟ-ಸುಖಗಳು ಮತ್ತು ಸಲಹೆ-ಸೂಚನೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಡಿಜಿ-ಐಜಿಪಿ ಡಾ. ಅಲೋಕ್‌ ಮೋಹನ್ ಕಟ್ಟಾಜ್ಞೆ ಮಾಡಿದ್ದಾರೆ.

ಇದಲ್ಲದೆ, ವಾರದಲ್ಲಿ ಒಮ್ಮೆಯಾದರೂ ಡಿಸಿಪಿ/ಎಸ್​ಪಿಗಳು ರಾತ್ರಿ ಪಾಳಿ ಕರ್ತವ್ಯ ಮಾಡಬೇಕು. ಕರ್ತವ್ಯನಿರತ ಸಿಬ್ಬಂದಿ ಸರಿಯಾಗಿ ಬೀಟ್ ಮಾಡುತ್ತಿದ್ದಾರಾ, ಇ-ಬೀಟ್ ಮತ್ತು ಆ್ಯಪ್ ವ್ಯವಸ್ಥೆ, ದಾಖಲಾತಿಗಳನ್ನು ಪಾಲಿಸುತ್ತಿದ್ದಾರಾ ಎಂಬುದನ್ನು ಪರಿಶೀಲನೆ ನಡೆಸಬೇಕು. ಇಲ್ಲವಾದರೆ, ಅಂಥವರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟು ಕರ್ತವ್ಯ ನಿರ್ವಹಿಸುವಂತೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ಕೊಡುತ್ತೇನೆ ಎಂದು ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net