ಗುಂಡಿಮಯ ರಸ್ತೆಗಳ ದುರಸ್ತಿಗೆ ಆಗ್ರಹ

hbr (1)
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ ಹೆಬ್ರಿಯ ಪ್ರಮುಖ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಶೀಘ್ರವೇ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ಕುಚ್ಚೂರು ಶ್ರೀಕಾಂತ್ ಪೂಜಾರಿ ನೇತೇತ್ವದಲ್ಲಿ ಸಾರ್ವಜನಿಕರು ಶುಕ್ರವಾರ ಮೂರುರಸ್ತೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಮುಖ್ಯ ರಸ್ತೆಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಹೊಂಡ ಮುಚ್ಚಲು ಹಾಕಿರುವ ಜಲ್ಲಿಪುಡಿಯ ಧೂಳಿನಿಂದಾಗಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಶೀಘ್ರ ದುರಸ್ತಿಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಪೂಜಾರಿ ಕುಚ್ಚೂರು ಒತ್ತಾಯಿಸಿದರು. ಹೆಬ್ರಿಯ ಪ್ರಮುಖ ಎಲ್ಲ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ಹೊಂಡಗಳಿಗೆ ಹಾಕಿರುವ ಜಲ್ಲಿಕಲ್ಲು ಮೇಲೆದ್ದು ಜಾರುತ್ತಿದ್ದು ಬಹಳ ತೊಂದರೆಯಾಗುತ್ತಿದೆ ಎಂದರು. ಹೆಬ್ರಿ ತಹಸೀಲ್ದಾರ್ ಪ್ರಸಾದ್ ಎಸ್.ಎ. ಮನವಿ ಸ್ವೀಕರಿಸಿ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ವಾರದೊಳಗೆ ಸರಿಪಡಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಹೋರಾಟಗಾರ ಕೆರೆಬೆಟ್ಟು ಸಂಜೀವ ಶೆಟ್ಟಿ, ಸುರೇಂದ್ರ ಚಾರ, ಸುಧಾಕರ್ ಸಾಲಿಯಾನ್, ಹೆರಿಯಣ್ಣ, ರಂಜಿತ್, ಆಟೋರಿಕ್ಷಾ ಚಾಲಕ ಮಾಲೀಕರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲೆಯ ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದೆ. ದೀಪಾವಳಿ ಹೊತ್ತಿಗೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು. ಕಿರಣ್, ಕಾರ್ಯಪಾಲಕ ಇಂಜಿನಿಯರ್ (ಇಇ)ಪಿಡಬ್ಲ್ಯೂಡಿ ಇಲಾಖೆ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net