ಎಸ್​ಎಸ್​ಎಲ್​ಸಿ ತೇರ್ಗಡೆಯ ಅಂಕ ಇಳಿಕೆ ಸರಿಯಲ್ಲ

Minister Lead
Published on

ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್​ ಅಭಿಪ್ರಾಯ

ನಿರ್ಧಾರದ ಮುನ್ನ ಸೂಕ್ತ ಅಧ್ಯಯನ, ಚರ್ಚೆ ಅಗತ್ಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ತೇರ್ಗಡೆಗೆ ಈ ಮೊದಲು ಇದ್ದ ಕನಿಷ್ಠ 35 ಅಂಕಗಳ ಬದಲಾಗಿ 33ಕ್ಕೆ ಇಳಿಕೆ ಮಾಡಿ ಶಾಲಾ ಶಿಕ್ಷಣ ಮಂತ್ರಿ ಆದೇಶ ಹೊರಡಿಸಿದ್ದಾರೆ. ಇದು ಸರಿಯಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ನಿರ್ಧಾರದ ಕುರಿತು ಇನ್ನಷ್ಟು ಚರ್ಚೆಯಾಗಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್​ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯ ಜಿಲ್ಲಾ ಕಾಂಗ್ರೆಸ್​ ಕಚೇರಿಗೆ ಶನಿವಾರ (ಅ.18) ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಶಾಲಾ ಶಿಕ್ಷಣ ಮಂತ್ರಿಯಾದ ಮಧು ಬಂಗಾರಪ್ಪ ಅವರು ಯಾವ ಉದ್ದೇಶ ಇಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಇಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕು ಎನ್ನುವುದು ನನ್ನ ಅನಿಸಿಕೆ ಎಂದರು.

ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ

ಕಾಂಗ್ರೆಸ್​ ಸರ್ಕಾರ ಆರ್​ಎಸ್​ಎಸ್​ಗೆ ಕಡಿವಾಣ ಹಾಕುವ ಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬೇರೆ ಬೇರೆ ರಾಜ್ಯಗಳಲ್ಲಿಯೂ ಆರ್​ಎಸ್​ಎಸ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗದಲ್ಲಿ ಎಲ್ಲ ಜಾತಿ, ಧರ್ಮದ ಜನರು ಇರುತ್ತಾರೆ. ಅಲ್ಲಿ ಕೆಲವು ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ವಿರೋಧದ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವುದೇ ಸಂಘಟನೆಗಳು ಕಾರ್ಯಕ್ರಮ ಮಾಡಲು ಅನುಮತಿ ಪಡೆಯಲೇಬೇಕು. ಸ್ವೇಚ್ಛಾಚಾರದ ನಡವಳಿಕೆಗೆ ಕಡಿವಾಣ ಹಾಕಲು, ಎಲ್ಲರಲ್ಲೂ ಶಿಸ್ತಿರಲಿ ಎಂಬ ಉದ್ದೇಶಕ್ಕೆ ಸರ್ಕಾರ ಈ ಆದೇಶ ಮಾಡಿದೆ. ಇದು ಆರ್​ಎಸ್​ಎಸ್​ಗೆ ಮಾತ್ರವಲ್ಲ, ಎಲ್ಲ ಸಂಘ-ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸಮರ್ಥನೆ ನೀಡಿದರು.

ಇನ್ಫೋಸಿಸ್​ ಸಂಸ್ಥೆಗಿದೆ ಅಪಾರ ಗೌರವ

Minister 2
ರಾಜ್ಯ, ದೇಶವಷ್ಟೇ ಅಲ್ಲದೆ ಪ್ರಪಂಚದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ಫೋಸಿಸ್​ ಭಾರಿ ಸಾಧನೆ ಮಾಡಿದ್ದು, ಆ ಸಂಸ್ಥೆಯ ಬಗ್ಗೆ ನನಗೂ ಸಹ ಅಪಾರ ಗೌರವವಿದೆ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯನ್ನು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ವಿರೋಧಿಸಿದ್ದಾರೆ. ಅದು ಸಮೀಕ್ಷೆಯಾಗಿದ್ದರಿಂದ ಸಹಜವಾಗಿ ಎಲ್ಲರೂ ತಮ್ಮ ಜಾತಿ-ಧರ್ಮ ಉಲ್ಲೇಖಿಸಬೇಕಾಗುತ್ತದೆ. ಕಾಂಗ್ರೆಸ್​ ಸರ್ಕಾರ ಈ ಸಮೀಕ್ಷೆ ಮಾಡುತ್ತಿರುವುದಕ್ಕೆ ನಿಮ್ಮ ವಿರೋಧವೇ? ಮುಂದಿನ ವರ್ಷ ಕೇಂದ್ರ ಬಿಜೆಪಿ ಸರ್ಕಾರ ನೇರವಾಗಿಯೇ ಜಾತಿ ಗಣತಿ ಮಾಡುತ್ತಿದೆ. ಆಗಲೂ ನೀವು ವಿರೋಧ ವ್ಯಕ್ತಪಡಿಸುತ್ತೀರಾ? ವಿಶ್ವವೇ ನಿಮ್ಮನ್ನು ನೋಡುತ್ತಿರುತ್ತದೆ. ಹೀಗಾಗಿ ತಾವುಗಳು ನೀಡುವ ಸೂಚನೆ, ಅನುಭವಗಳು ಏನು ಎನ್ನುವುದನ್ನೂ ದೇಶದ ಯುವ ಸಮೂಹ ಆಲಿಸುತ್ತದೆ. ಈ ವಿಚಾರದಲ್ಲಿ ಅವರು ಬಹಳ ಯೋಚನೆ ಮಾಡಿ ಹೇಳಿಕೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಸಚಿವ ಸುಧಾಕರ್​ ಅಭಿಪ್ರಾಯಪಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net