

ವಿಜಯವಾಣಿ ಸುದ್ದಿಜಾಲ ಉಡುಪಿ
ನನ್ನ ಹಾಗೂ ಪ್ರೊ. ತಾಳ್ತಜೆ ಕೇಶವ ಭಟ್ಟರ ವ್ಯಕ್ತಿತ್ವದಲ್ಲಿ ಸಾಮ್ಯತೆ ಇದೆ. ಆದರೆ, ಅವರ ಎತ್ತರವೇ ಬೇರೆ. ನನ್ನ ಎತ್ತರವೇ ಬೇರೆ. ಹೆತ್ತವರೆಲ್ಲ ತಾಯಂದಿರಲ್ಲ. ಆದರೆ, ತಾಯ್ತನದ ಹೃದಯವಂತರು ನೈಜ ತಾಯಂದಿರು. ಸವಾಲು ಎದುರಿಸುವ ಸಾಹಸ, ಸಾಮರ್ಥ್ಯವಿದ್ದರೆ ಸಾಧನೆ ಸಾಧ್ಯ. ಪ್ರೀತಿಗೆ ಪರ್ಯಾಯವಿಲ್ಲ. ಈ ಎಲ್ಲ ಸಂಗತಿಗಳ ಸಾಕಾರ ಮೂರ್ತಿಯಾಗಿದ್ದವರು ಕೇಶವ ಭಟ್ಟರು. ಜೀವನದಲ್ಲಿ ಸ್ಮರಣೆ ಹಾಗೂ ಅದರ ವಿಸ್ತರಣೆ ಅತಿಮುಖ್ಯ ಎಂದು ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಅಭಿಮತ ವ್ಯಕ್ತಪಡಿಸಿದರು.
ಕುವೆಂಪು ಭಾಷಾ ಪ್ರಾಧಿಕಾರ ಬೆಂಗಳೂರಿನ ಮಾಜಿ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ ಹಳಗನ್ನಡ ಓದು; ಏಕೆ? ಹೇಗೆ? ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ದೇಶದ 11 ಶಾಸ್ತ್ರೀಯ ಭಾಷೆಗಳಲ್ಲಿ ಕನ್ನಡವೂ ಒಂದು. ಹಳಗನ್ನಡವೆಂದರೆ ಪ್ರಾಚೀನ ಕಾವ್ಯ, ಸಾಹಿತ್ಯ, ಶಾಸನಗಳನ್ನು ಒಳಗೊಂಡಿದೆ. ವಚನಗಳನ್ನು ಹೊರತಪಡಿಸಿ ಕವಿರಾಜಮಾರ್ಗದಿಂದ ಆರಂಭಿಸಿ ವಡ್ಡಾರಾಧನೆ, ಪಂಪ-ರನ್ನರ ಸಹಿತ ಹಿಂದಿನ ಅನೇಕ ಕವಿಗಳ ಕಾವ್ಯಗಳೆಲ್ಲವೂ ಹಳಗನ್ನಡ. ಅವುಗಳನ್ನು ಅರ್ಥ ಸಹಿತ ಪಾಠ ಮಾಡುವವರು ಈಗ ಲಭ್ಯವಿಲ್ಲ. ಹೀಗಾಗಿ ಪದವಿ, ಸ್ನಾತಕೋತ್ತರ ಅಧ್ಯಯನದಲ್ಲಿ ಹಳಗನ್ನಡದ ಪಾಠಗಳು ಮಾಯವಾಗಿದೆ. ಅನೇಕ ಕನ್ನಡ ವಾದಿಗಳ ತತ್ವದಂತೆ ಮಹಾಪ್ರಾಣ ಶಬ್ದವನ್ನೇ ಬಿಟ್ಟು ಸಾಹಿತ್ಯ, ಅಧ್ಯಯನ ನಡೆಯುವ ಕಾಲ ಆರಂಭಗೊಂಡಿದೆ. ಮಹಾಪ್ರಾಣಗಳ ಕುರಿತು ತಿಳಿಯದೆ, ಕಲಿಯದೆ ಹಳಗನ್ನಡ ಓದಿದರೆ ಅರ್ಥವಾಗದು ಎಂದರು.
ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಎಸ್. ಶಿವತ್ತಾಯ ಪ್ರಾರ್ಥಿಸಿದರು. ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜಕ ಡಾ. ತಾಳ್ತಜೆ ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿಎಂ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.