ಅಯೋಧ್ಯೆ ಬಾಲರಾಮನ ಪೆಂಟೆಂಡ್​ಗೆ ಡಿಮಾಂಡ್​: 2 ಸಾವಿರ ಕೋಟಿ ವಹಿವಾಟು ನಿರೀಕ್ಷೆ

balarama
Published on

ಬೆಂಗಳೂರು:ಭಾರತ ಸಂಪ್ರದಾಯದಲ್ಲಿ ಅಕ್ಷಯ ತೃತೀಯಾಕ್ಕೆ (ಏ. 30) ವಿಶೇಷ ಮಹತ್ವವಿದೆ. ಈ ಶುಭದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ ಹಾಗೂ ಸಂಪತ್ತು ಅಕ್ಷಯವಾಗುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಬಡವರಿಂದ ಶ್ರೀಮಂತವರೆಗೂ ತಮ್ಮ ಸಾಮರ್ಥ್ಯ ತಕ್ಕಂತೆ ಚಿನ್ನಾಭರಣ ಖರೀದಿಸುತ್ತಾರೆ. ಕೆಲವರು ಸಾಲ ಮಾಡಿಯಾದರೂ ಮೂಗತಿ ಖರೀದಿಸುವ ವಾಡಿಕೆ ಇದೆ.

ಅಕ್ಷಯ ತೃತೀಯಾದಂದು ಈ ಬಾರಿ ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ವಹಿವಾಟು ಆಗಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಶೇ.30 ಕಾಪೋರ್ರೇಟ್​ ಅಥವಾ ಬೃಹತ್​ ಆಭರಣ ಮಳಿಗೆಗಳಿದ್ದರೆ, ಶೇ.70 ಸಣ್ಣ ಮಳಿಗೆಗಳಿವೆ. ರಾಜ್ಯದಲ್ಲಿ ಸಣ್ಣ ಮತ್ತು ಕಾಪೋರ್ರೇಟ್​ ಸೇರಿ ಅಂದಾಜು ಲಕ್ಷಕ್ಕಿಂತ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಬಹುತೇಕ ಸಣ್ಣ ವ್ಯಾಪಾರಿಗಳು ವಂಶಪಾರಂಪರ್ಯವಾಗಿ ಈ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಅಕ್ಷಯಾ ತೃತೀಯಾ ದಿನವನ್ನು ಆಚರಿಸಲು ಅಣಿಯಾಗಿದ್ದಾರೆ.

ಅಯೋಧ್ಯೆಯ ಬಾಲರಾಮನ ಪೆಂಟೆಂಡ್​ಗೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿದೆ. ಲೈಟ್​ವೇಟ್​ ಆಭರಣ ಖರೀದಿ ಟ್ರೆಂಡ್​ ಜೋರಾಗಿದೆ. ಗ್ರಾಹಕರು ಹಗುರ ತೂಕದ ಆಭರಣಗಳನ್ನು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಈ ಹಿಂದೆ 50 ಗ್ರಾಂ ತೂಕದ ಬಳೆ, ನೆಕ್ಲೇಸ್​ ಮತ್ತು ಸರಗಳು ಸೇರಿ ಇನ್ನಿತರ ವಿನ್ಯಾಸದ ಆಭರಣಗಳು ಬರುತ್ತಿದ್ದವು. ಈಗ ಮಾರುಕಟ್ಟೆಗಳಲ್ಲಿ ಕಡಿಮೆ ತೂಕ ಹೊಂದಿರುವ ಆಭರಣಗಳ ಸಂಗ್ರಹವಿದೆ. ನೋಡುವುದಕ್ಕೂ ಚೆಂದವಾಗಿವೆ. ಈ ಹಿನ್ನೆಲೆ ಗ್ರಾಹಕರು 10 ಗ್ರಾಂ ತೂಕವಿರುವ ಆಭರಣಗಳನ್ನು ಹೆಚ್ಚಾಗಿ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಸಾಮಾನ್ಯವಾಗಿ ಶೇ.60 ಗ್ರಾಹಕರು, 10 ಗ್ರಾಂನಿಂದ 50 ಗ್ರಾಂವರೆಗೆ ಚಿನ್ನ ಖರೀದಿಸಿದರೆ, ಶೇ.20 ಗ್ರಾಹಕರು 100 ಗ್ರಾಂವರೆಗೆ ಹಾಗೂ ಇನ್ನುಳಿದವರು ಕಾಲು ಕೆ.ಜಿ.ಯಿಂದ ಅರ್ಧ ಕೆ.ಜಿ.ವರೆಗೆ ಖರೀದಿಸುತ್ತಾರೆ.

ಹಲವು ಆಫರ್​​ ಘೋಷಣೆ: ಅಕ್ಷಯಾ ತೃತೀಯಾ ದಿನದಂದು ಗ್ರಾಹಕರನ್ನು ಹೆಚ್ಚು ಸೆಳೆಯಲು ಕಾಪೋರ್ರೇಟ್​ ವಲಯದ ಚಿನ್ನಾಭರಣ ಮಳಿಗೆಗಳು ಬೆಳ್ಳಿ, ಚಿನ್ನ ಮತ್ತು ವಜ್ರಾಭರಣ ಖರೀದಿಯಲ್ಲಿ ಹೊಸ ಆರ್​ಗಳನ್ನು ಘೋಷಿಸಿವೆ. ಉಚಿತ ವೇಸ್ಟಿಂಗ್​, ಮೇಕಿಂಗ್​ ಚಾರ್ಜ್​, ಸಾವಿರ ಅಥವಾ 2 ಸಾವಿರ ರೂ. ಮೌಲ್ಯದ ವೋಚರ್​ ಇತ್ಯಾದಿ ಕೊಡುಗೆ ನೀಡಲಿವೆ. ಕೆಲ ಮಳಿಗೆಗಳು ಚಿನ್ನಾಭರಣ ಮಾರಾಟ ಮೇಳ ಮತ್ತು ಪ್ರದರ್ಶನಗಳನ್ನು ಏರ್ಪಡಿಸಿವೆ.

ಹಾಲ್​ಮಾರ್ಕ್​ ನಿಯಮ: ಪ್ರತಿ ವರ್ಷ ಶ್ರೀಮಂತರು ಹಾಗೂ ರಾಜಕೀಯ ಮುಖಂಡರು ಚಿನ್ನಾಭರಣಗಳ ಮೇಲೆ ನೂರಾರು ಕೋಟಿ ರೂ.ಕಪ್ಪು ಹೂಡಿಕೆ ಮಾಡಿ "ಬಿಳಿ' ಮಾಡಿಕೊಳ್ಳತ್ತಿದ್ದರು. ಪ್ರತಿ ವರ್ಷ ನೂರಾರು ನಕಲಿ ಚಿನ್ನ ಪ್ರಕರಣಗಳು ಹಾಗೂ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದವು. ಕಳ್ಳರು ಕದ್ದ ಚಿನ್ನವನ್ನು ಮಾರಾಟ ಮಾಡುತ್ತಿದ್ದರು. ಆದ್ದರಿಂದ ಚಿನ್ನಗಳಿಗೆ ಶಾಶ್ವತವಾಗಿ ಸಂಖ್ಯೆ ನೀಡುವುದರಿಂದ ಈ ಎಲ್ಲದಕ್ಕೂ ತಡೆ ಬೀಳುವ ಜತೆಗೆ ಸುಲಭವಾಗಿ ಆಭರಣಗಳನ್ನು ಗುರುತಿಸಲು ಅನುಕೂಲವಾಗಲಿದೆ. ಚುನಾವಣೆಗಳ ಸಂದರ್ಭದಲ್ಲಿ ವಿವಿಧ ಪಕ್ಷಗಳ ರಾಜಕೀಯ ಅಭ್ಯರ್ಥಿಗಳು ಕಳ್ಳಮಾರ್ಗದಲ್ಲಿ ಕೆ.ಜಿ.ಗಟ್ಟಲೆ ಚಿನ್ನಾಭರಣಗಳನ್ನು ಖರೀದಿಸಿ ಮತದಾರರಿಗೆ ಹಂಚುತ್ತಿದ್ದರು. ಈ ವೇಳೆ ಚಿನ್ನಾಭರಣ ಮಾಲೀಕರು ನಕಲಿ ಬಿಲ್​ ತಯಾರಿಸಿ ಇವರಿಗೆ ನೀಡುತ್ತಿದ್ದರು. ಸರ್ಕಾರಕ್ಕೂ ತೆರಿಗೆ ವಂಚಿಸುತ್ತಿರುವ ಆರೋಪಗಳಿದ್ದವು. ಈ ಎಲ್ಲ ಅಕ್ರಮಗಳನ್ನು ತಡೆಯಲು ಪರಿಶುದ್ಧತೆ ಮತ್ತು ಗುಣಮಟ್ಟವನ್ನು ದೃಢೀಕರಿಸಲು ಈಗಾಗಲೆ ದೇಶದಲ್ಲಿ ಹಾಲ್​ಮಾರ್ಕ್​ ನಿಯಮ ಜಾರಿಯಾಗಿದೆ. ಭಾರತೀಯ ಮಾನದಂಡ ಮಂಡಳಿ (ಬಿಐಎಸ್​) ವರ್ಗೀಕೃತ ಚಿನ್ನಾಭರಣಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ನೀಡುವ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ಚಿನ್ನಾಭರಣಗಳ ಮಳಿಗೆಗಳಲ್ಲಿ ಚಿನ್ನ ಖರೀದಿಸುವ ವೇಳೆ ಮಾಲೀಕರು ಗ್ರಾಹಕರಿಗೆ ಮೋಸ ಮಾಡಲು ಸಾಧ್ಯವಿಲ್ಲ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಆರ್ಥಿಕ ನೀತಿ, ಬದಲಾದ ಆರ್ಥಿಕ ವ್ಯವಸ್ಥೆಯಿಂದಾಗಿ ದೀಪಾವಳಿ ಬಳಿಕ ರಾಜ್ಯದಲ್ಲಿ ಪ್ರತಿ ಗ್ರಾಂ ಚಿನ್ನ 13 ಸಾವಿರ ರೂ. ಮುಟ್ಟುವ ಸಾಧ್ಯತೆ ಇದೆ. ಈ ಬಾರಿ ಅಯೋಧ್ಯೆಯ ಬಾಲರಾಮನ ಚಿನ್ನದ ಕಾಯಿನ್​, ಲಕ್ಷ್ಮೀ ಕಾಯನ್​ಗೂ ಬೇಡಿಕೆ ಇದೆ.

| ಡಾ. ಬಿ. ರಾಮಾಚಾರಿ, ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net