

ಬೆಂಗಳೂರು: ರಾಜ್ಯದ ಶೇ.80 ಭೌಗೋಳಿಕ ಪ್ರದೇಶದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳವಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿ ಕರಾವಳಿಯ ವ್ಯಾಪ್ತಿಯ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 2-3 ಡಿ.ಸೆ. ಉಷ್ಣಾಂಶ ಹೆಚ್ಚಿದೆ.
ಕಲಬುರಗಿ 41.5, ಬೀದರ್, ರಾಯಚೂರು 40, ವಿಜಯಪುರ 40 ಡಿಗ್ರಿ.ಸೆ ಉಷ್ಣಾಂಶ ದಾಖಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಗರಿಷ್ಠ ತಾಪಮಾನವು 34-40 ಡಿ.ಸೆ. ವರದಿಯಾಗಿದೆ. ಹೊನ್ನಾವರ ಮತ್ತು ಕಾರವಾರದಲ್ಲಿ ವಾಡಿಕೆಗಿಂತ 5 ಡಿ.ಸೆ.ಅಧಿಕವಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳದಲ್ಲಿ 38 ಡಿ.ಸೆ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಮಡಿಕೇರಿಯಲ್ಲಿ 35&36 ಡಿ.ಸೆ.ಇದೆ. ಚಿಂತಾಮಣಿ 37.1, ಮೈಸೂರಿನಲ್ಲಿ 35.2 ಡಿ.ಸೆ.ದಾಖಲಾಗಿದೆ. ಬೆಂಗಳೂರು ಸುತ್ತಮುತ್ತ ಮುಂದಿನ 48 ಗಂಟೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34 ಡಿ.ಸೆ. ಮತ್ತು 23 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ತಾಪಮಾನ ಹೆಚ್ಚಳದಿಂದ ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬೇಡಿ ಮತ್ತು ಗೋಡೆಗಳಿಗೆ ಒರಗಬಾರದು. ವಿದ್ಯುಚ್ಛಕ್ತಿ ನಡೆಸುವ ಎಲ್ಲ ವಸ್ತುಗಳಿಂದ ದೂರ ಇರಬೇಕು. ಅದಷ್ಟೂ ದೂರದ ಪ್ರಯಾಣವನ್ನು ತಪ್ಪಿಸುವಂತೆ ಇಲಾಖೆ ಸಲಹೆ ಕೊಟ್ಟಿದೆ.
ಮಳೆ ಸಾಧ್ಯತೆ?
ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಳವಾದಂತೆ ಮುಂದಿನ 7 ದಿನ ರಭಸ ಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಂಭವ ಇದೆ. ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಿತ್ರದುರ್ಗ, ದಾವಣಗೆರೆ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಏ.26ರಿಂದ ಮೇ.2ರವರೆಗೆ ಮಳೆಯಾಗಲಿದೆ. ಬಿರುಗಾಳಿಯಿಂದ ಬಾಳೆ, ಪಪ್ಪಾಯಿ, ವಿದ್ಯುತ್, ಸಂವಹನ, ತೋಟ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಲಿದೆ.