

ಬೆಂಗಳೂರು: ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ನಿನ್ನೆ ಡ್ರಮ್ನೊಳಗೆ ಮಹಿಳೆ ಶವ ಪತ್ತೆಯಾಗಿರುವ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆರೋಪಿಗಳ ಚಲನವಲನ ಪತ್ತೆಯಾಗಿದ್ದು, ಬಂಧನಕ್ಕೆ ವಿಶೇಷ ತಂಡಗಳು ಬಲೆ ಬೀಸಿವೆ.
ಜ.4ರಂದು ಯಶವಂತಪುರ ರೈಲು ನಿಲ್ದಾಣದಲ್ಲಿ ಸಹ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ ಆಗಿತ್ತು. ಈ ಪ್ರಕರಣ ಮಾಸುವ ಮೊದಲೇ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಶವ ಪತ್ತೆ ಆಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಎರಡು ಕೃತ್ಯಗಳಲ್ಲಿ ಒಂದೇ ಗ್ಯಾಂಗ್ ಕೈವಾಡದ ಶಂಕೆ ಸಹ ವ್ಯಕ್ತವಾಗಿದೆ.
ಆಟೋದಲ್ಲಿ ಮೂವರು ವ್ಯಕ್ತಿಗಳು ಡ್ರಮ್ ತಂದು ಬೈಯಪ್ಪನಹಳ್ಳಿ ರೈಲು ನಿಲ್ದಾಣ ಗೇಟ್ ಬಳಿ ಇಟ್ಟು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಯ ಮರಣೋತ್ತರ ಪರೀಕ್ಷೆ ಮುಗಿದಿದ್ದು, ವರದಿ ಬರಬೇಕಾಗಿದೆ. ಆದರೆ, ಮಹಿಳೆ ಚಹರೆ ಪತ್ತೆಯಾಗಿಲ್ಲ. 30ರಿಂದ 35 ವರ್ಷದ ಮಹಿಳೆ ಎನ್ನಲಾಗಿದೆ ಎಂದು ರೈಲ್ವೇ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಎರಡು ಪ್ರಕರಣಕ್ಕೂ ಸೌಮ್ಯತೆ ಇಲ್ಲ. ಬೇರೆ ಬೇರೆಯೇ ಗ್ಯಾಂಗ್ ಕೃತ್ಯ ಎಸಗಿರುವ ಮಾಹಿತಿ ಇದೆ. ಈಗಾಗಲೇ ಪ್ರತ್ಯೇಕ ಮೂರು ತಂಡಗಳು ರಚನೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿವೆ. ರೈಲು ನಿಲ್ದಾಣಗಳಲ್ಲಿ ಭದ್ರತೆ ಸಹ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.