

ಕಾಸರಗೋಡು: ನಗರದ ಕೀಯೂರು ಮೀನುಗಾರಿಕಾ ಬಂದರು ಸಮೀಪ ಗಾಳ ಹಾಕಿ ಮೀನು ಹಿಡಿಯುವಾಗ ನೀರುಪಾಲಾಗಿರಬೇಕೆಂದು ಸಂಶಯಿಸಲಾಗಿದ್ದ ಚೆಮ್ನಾಡ್ ಕಲ್ಲುವಳಪ್ಪಿಲ್ ನಿವಾಸಿ ಮಹಮ್ಮದ್ ರಿಯಾಸ್(36) ಮೃತದೇಹ, ತೃಶ್ಯೂರ್ ಚಾವಕ್ಕಾಡ್ ಸಮುದ್ರದಲ್ಲಿ ಪತ್ತೆಯಾಗಿದೆ. ಇವರು ನಾಪತ್ತೆಯಾಗಿ ಹತ್ತು ದಿನಗಳ ನಂತರ ಮೃತದೇಹ ಪತ್ತೆಯಾಗಿದೆ. ಮೀನು ಹಿಡಿಯುತ್ತಿದ್ದ ಕಾರ್ಮಿಕರು ಮೃತದೇಹ ಕಂಡು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ದಡಕ್ಕೆ ತಲುಪಿಸಿದ್ದರು. ಇವರು ಧರಿಸಿದ್ದ ಟ್ರಾೃಕ್ ಸ್ಯೂಟ್ನ ಜೇಬಲ್ಲಿ ಸ್ವಿಚ್ಆಫ್ ಆದ ಸ್ಥಿತಿಯಲ್ಲಿದ್ದ ಮೊಬೈಲ್ನ ಸಿಮ್ ತೆಗೆದು ಬೇರೊಂದು ಮೊಬೈಲ್ಗೆ ಹಾಕಿ ನೋಡಿದಾಗ ರಿಯಾಸ್ ಅವರದ್ದೆಂದು ಸ್ಪಷ್ಟಗೊಂಡಿತ್ತು. ತೃಶ್ಯೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವದ ಮಹಜರು ನಡೆಸಿದ ನಂತರ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.