ರಾಜ್ಯ ಹೆದ್ದಾರಿ ಹೊಂಡಮಯ: ಕಿನ್ನಿಗೋಳಿ- ಮೂಲ್ಕಿ ನಡುವಣ ಸಂಚಾರ ದುಸ್ತರ

road
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ರಾಜ್ಯ ಹೆದ್ದಾರಿ ಕಿನ್ನಿಗೋಳಿಯಿಂದ ಮೂಲ್ಕಿಗೆ ಬರುವ ರಸ್ತೆ ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಆವೃತವಾಗಿದ್ದು, ವಾಹನ ಚಾಲಕರು ಮತ್ತು ಪಾದಚಾರಿಗಳು ಪ್ರಾಣ ಭೀತಿಯಿಂದ ಸಂಚರಿಸುವಂತಾಗಿದೆ.

ಕಿನ್ನಿಗೋಳಿಯಿಂದ ಪದ್ಮನೂರು, ಪುನರೂರು, ಕಿಲ್ಪಾಡಿ, ಕಾರ್ನಾಡು ಹಾಗೂ ಮೂಲ್ಕಿವರೆಗೆ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿರುವುದು, ಗುಂಡಿಗಳು ನಿರ್ಮಾಣವಾಗಿರುವುದು ಹಾಗೂ ಸಣ್ಣ ಗುಂಡಿ (ಪೋಟ್‌ಹೋಲ್) ನಿರ್ಮಾಣವಾಗಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಇಂತಹ ಗುಂಡಿಗಳಿಗೆ ದ್ವಿಚಕ್ರವಾಹನಗಳ ಎದುರಿನ ಚಕ್ರ ಬಿದ್ದಲ್ಲಿ ವಾಹನ ಪಲ್ಟಿಯಾಗುವುದು ಗ್ಯಾರಂಟಿ.

ರಸ್ತೆ ಗುಂಡಿಗೆ ಮಣ್ಣು ಹಾಕಿದ್ದು, ಅದು ಒಣಗಿ ವಾಹನ ಸಂಚರಿಸುವಾಗ ರಸ್ತೆಯಲ್ಲಿ ಹರಡಿದ ಪರಿಣಾಮ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ಬದಿಯಲ್ಲಿ ಪೊದೆಗಳು ಬೆಳೆದಿರುವುದರಿಂದ ಜನರು ರಸ್ತೆ ಬದಿ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಮೆಸ್ಕಾಂ ಸಿಬ್ಬಂದಿಮರದ ಕೊಂಬೆ ಕಡಿದು ಅಲ್ಲಿಯೇ ಬಿಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.

ಮಳೆಗಾಲದ ಆರಂಭದಲ್ಲಿಯೇ ರಸ್ತೆಯ ನಿರ್ವಹಣೆ ನಡೆಸದ ಇಲಾಖೆ ಮಳೆಯ ಸಂದರ್ಭ ಜಲ್ಲಿ ಹುಡಿ ಅಥವಾ ಮಣ್ಣು ತುಂಬಿಸುತ್ತ್ತಿದೆ. ಇದು ಒಂದು ಮಳೆಗೆ ಕಿತ್ತು ಹೋಗುತ್ತಿದ್ದು, ಮತ್ತದೇ ಹೊಂಡ ಗುಂಡಿಯ ರಸ್ತೆಯಲ್ಲಿ ಸಂಚರಿಸಬೇಕಿದೆ.

ರಸ್ತೆ ಪೂರ್ತಿ ಹೊಂಡಗಳೆ ತುಂಬಿದ್ದು ತಿರುವಿನಲ್ಲಿ ಇರುವ ಹೊಂಡ ಬಹಳ ಅಪಾಯಕಾರಿ. ದೂರು ನೀಡಿದರೆ ಕಲ್ಲು ಮಣ್ಣು ಹಾಕುತ್ತಾರೆ ಇದರಿಂದ ಪರಿಸ್ಥಿತಿ ಇನ್ನೂ ಹೆಚ್ಚು ಹದಗೆಟ್ಟಿದೆ. -ನರೇಶ್ ಅಮೀನ್ ರಿಕ್ಷಾ ಚಾಲಕರು https://www.vijayavani.net/jakribettu-ganeshotsava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net