

ಮುಳ್ಳೇರಿಯ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮುನ್ನಡೆಸುತ್ತಿರುವ ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದುದು ಮದ್ಯವರ್ಜನ ಶಿಬಿರ. ಈ ಮೂಲಕ ಲಕ್ಷಾಂತರ ಕುಟುಂಬದ ಬಾಳಿಗೆ ಬೆಳಕಾಗಿದ್ದಾರೆ ಎಂದು ಚಲಚಿತ್ರ ನಿರ್ದೇಶಕ ಕಿರಣ್‌ರಾಜ್ ಕಾಸರಗೋಡು ಹೇಳಿದರು.
ಮುಳ್ಳೇರಿಯದ ಗಣೇಶ ಕಲಾ ಮಂದಿರದಲ್ಲಿ ನಡೆಯುತ್ತಿರುವ 1878ನೇ ಮದ್ಯವರ್ಜನ ಶಿಬಿರದ 4ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ, ಕಿರಣ್‌ರಾಜ್ ಅವರನ್ನು ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಕೃಷ್ಣ ಭಟ್ ಬಳಕ್ಕ, ಶಿಬಿರಾಧಿಕಾರಿ ದಿವಾಕರ ಪೂಜಾರಿ ಮುಳ್ಳೇರಿಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ರಾಜೀವ್, ಮೇಲ್ವಿಚಾರಕ ಸುರೇಶ್, ಸುಮಾಲತಾ ಎಡನೀರು ಮತ್ತು ವಲಯದ ಸೇವಾಪ್ರತಿನಿಧಿಗಳು, ನವಜೀವನ ಸದಸ್ಯರು, ಶೌರ್ಯ ಘಟಕ ಸದಸ್ಯರು ಉಪಸ್ಥಿತರಿದ್ದರು.