

ಬಂಟ್ವಾಳ: ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರತಾಪ್ ಕ್ರೀಡಾ ಸಂಘದ ವತಿಯಿಂದ ವಾರ್ಷಿಕ ಕ್ರೀಡಾಕೂಟ ಶನಿವಾರ ನಡೆಯಿತು.
ವಿವಿಧ ಕ್ರೀಡೆಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪ್ರತಿನಿಧಿಸಿದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯು ಮನಸ್ಸು ಮತ್ತು ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀರುತ್ತದೆ. ಸತತ ಪ್ರಯತ್ನದಿಂದ ಕ್ರೀಡಾಕ್ಷೇತ್ರದ ಅವಕಾಶಗಳನ್ನು ಬಳಸಿ ಸಾಧನೆ ಮಾಡಬೇಕು ಎಂದರು.
ರಾಷ್ಟ್ರೀಯ ಕಬಡ್ಡಿ ಆಟಗಾರ ಭರತ್ ಡಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ನಮ್ಮ ದೇಶ ಕ್ರೀಡಾಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಬೇಕಾದರೆ ಪ್ರತಿಯೊಬ್ಬರೂ ದಿನನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕ್ರೀಡಾ ಸಂಘದ ನಿರ್ದೇಶಕ ಪ್ರಶಾಂತ್ ಸೋಮಯಾಜಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿ ಪ್ರಭಾಕರ ಶೆಟ್ಟಿ, ಆಳ್ವಾಸ್ ಕಾಲೇಜಿನ ಕಬಡ್ಡಿ ತರಬೇತುದಾರ ವರುಣ್ ಕೊಟ್ಟಾರಿ, ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ, ಉಪ ಪ್ರಾಂಶುಪಾಲೆ ಸುಕನ್ಯಾ, ಕ್ರೀಡಾ ಸಂಘದ ನಿರ್ದೇಶಕ ಪ್ರಶಾಂತ್ ಸೋಮಯಾಜಿ ಉಪಸ್ಥಿತರಿದ್ದರು. ಉಪನ್ಯಾಸಕಿ ಸಂಧ್ಯಾ ಕುಮಾರಿ ಸ್ವಾಗತಿಸಿದರು. ಜಯಸೂರ್ಯ ವಂದಿಸಿದರು. ವಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.