ವೇತನ ನೀಡದ ಸಂಸ್ಥೆಗಳ ಮಾನ್ಯತೆ ರದ್ದು, ಬಲವಂತದ ಬಾಡಿಗೆ ವಸೂಲಿ ವಿರುದ್ಧ ಕಠಿಣ ಕ್ರಮ | ಡಿಸಿಎಂ ಸಿಎನ್​ಎ ಎಚ್ಚರಿಕೆ

Dr Ashwath Narayan
Published on

ಬೆಂಗಳೂರು: ಶಿಕ್ಷಕರಿಗೆ ಸಂಬಳ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು, ಬಲವಂತದ ಬಾಡಿಗೆ ವಸೂಲಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ..

ಇವು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ನೀಡಿದ ಎಚ್ಚರಿಕೆಗಳು. ದಿಗ್ವಿಜಯ ನ್ಯೂಸ್ 247 ಮತ್ತು ವಿಜಯವಾಣಿ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 2020-21ನೇ ಸಾಲಿನ ಶುಲ್ಕ ವಸೂಲಿಯನ್ನು ಮೂರು ತಿಂಗಳು ಮುಂದೂಡುವಂತೆ ತಿಳಿಸಲಾಗಿದೆ. ಆದರೆ, ವಸೂಲಿ ಮಾಡದಂತೆ ಅಥವಾ ವಿನಾಯಿತಿ ನೀಡುವಂತೆ ಹೇಳಿಲ್ಲ. ಹೀಗಿರುವಾಗ ಶಿಕ್ಷಕರ ಸಂಬಳ ನೀಡದಿರುವುದನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಪ್ರಕರಣಗಳ ವಿರುದ್ಧ ದೂರು ನೀಡಿದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾನೂನು ಕ್ರಮಕೈಗೊಳ್ಳಲಿದೆ ಎಂದರು. ಸ್ಟಾರ್ಟ್​ಅಪ್ ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೇಂದ್ರ ಸರ್ಕಾರಕ್ಕೂ ಗಮನ ಸೆಳೆದು ಪರಿಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಖಾನೆ, ಐಟಿ-ಬಿಟಿ ಕಂಪನಿಗಳನ್ನು ಮುಚ್ಚಿ ನೌಕರರನ್ನು ಸಂಕಷ್ಟಕ್ಕೆ ತಳ್ಳದಂತೆ ಉದ್ಯಮಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಕೆಲವು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ನೌಕರರ ಸಂಬಳವನ್ನು ಶೇ.20-30 ಕಡಿತ ಮಾಡುತ್ತಿರುವುದು ವರದಿಯಾಗಿದೆ. ಕೆಲವರು ನೌಕರರನ್ನು ಕೆಲಸದಿಂದಲೇ ತೆಗೆದು ಹಾಕುವ ದೂರುಗಳು ಬರುತ್ತಿವೆ. ಈ ಕುರಿತು ಉದ್ಯಮಿಗಳ ಮನವೊಲಿಸಲಾಗುವುದು ಎಂದು ಹೇಳಿದರು.

ಲಾಕ್​ಡೌನ್ ಹಿನ್ನೆಲೆ ಮದ್ಯದ ಅಂಗಡಿ ಮುಚ್ಚಿರುವುದರಿಂದ ಕಳ್ಳಭಟ್ಟಿ, ಆತ್ಮಹತ್ಯೆ, ವಿತ್​ಡ್ರಾಯಲ್ ಸಿಂಡ್ರೋಮ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ತಜ್ಞರ ಸಲಹೆ ಪಡೆದು ಮದ್ಯದಂಗಡಿ ತೆರೆಯುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಆನ್​ಲೈನ್ ಬೋಧನೆಗೆ ಹೆಚ್ಚಿನ ಆದ್ಯತೆ: ಕರೊನಾದಿಂದ ಉನ್ನತ ಶಿಕ್ಷಣದ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ವಿದ್ಯಾರ್ಥಿಗಳ ಬೋಧನೆಗೆ ಯಾವುದೇ ವ್ಯತ್ಯಯವಾಗಿಲ್ಲ. ಯುಟ್ಯೂಬ್ ಚಾನಲ್, ಆನ್​ಲೈನ್, ಝುಮ್ ಆಪ್, ಮೈಕ್ರೋಸಾಫ್ಟ್ ಪ್ಲಾಟ್ ಫಾಮ್ರ್ ಬಳಸಿ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಅನೇಕ ಉಪ ಕ್ರಮಗಳನ್ನು ಕೈಗೊಂಡಿದೆ ಎಂದ ಡಿಸಿಎಂ, ವರ್ಕ್ ಫ್ರಮ್ ಹೋಮ್ೆ ಇಂಟರ್​ನೆಟ್ ಪ್ರೊವೈಡರ್​ಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. 4ಜಿ ಅನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದರಿಂದ ಸಾಕಷ್ಟು ಐಟಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ, ಪರಿಹರಿಸಲು ಸೂಚಿಸಲಾಗುವುದು ಎಂದು ಬೆಂಗಳೂರಿನ ಸತೀಶ್ ಪ್ರಶ್ನೆಗೆ ಉತ್ತರಿಸಿದರು.

ಕೃಷಿ ಉತ್ಪನ್ನ ಸಾಗಣೆ, ಮಾರಾಟಕ್ಕೆ ವ್ಯವಸ್ಥೆ: ಕೃಷಿ ಉತ್ಪನ್ನ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಿಲ್ಲ. ರೈತರು ಉತ್ಪನ್ನಗಳನ್ನು ತಮಗೆ ಬೇಕಾದ ಸ್ಥಳಕ್ಕೆ ಕೊಂಡೊಯ್ದು ಮಾರಾಟ ಮಾಡಬಹುದು. ಹಾಪ್​ಕಾಮ್್ಸ ಕೂಡ ತೋಟಗಾರಿಕೆ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಪ್ಪಳದ ರಮೇಶ್ ಪ್ರಶ್ನೆಗೆ ಅಶ್ವತ್ಥನಾರಾಯಣ ಉತ್ತರಿಸಿದರು.

ಕೇಬಲ್ ಆಪರೇಟರ್​ಗೆ ರಕ್ಷಣೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ: ಕರೊನಾ ವಿರುದ್ಧದ ಹೋರಾಟದಲ್ಲಿ ಕೇಬಲ್ ಅಪರೇಟರ್​ಗಳ ಪಾತ್ರವೂ ಮಹತ್ವದ್ದಿದೆ. ಜನರಿಗೆ ಇಂಟರ್​ನೆಟ್, ಕೇಬಲ್ ಸೇವೆ ಒದಗಿಸುವ ಹಿನ್ನೆಲೆ ಈಗಾಗಲೇ 350 ಜನರಿಗೆ ಪಾಸ್ ವ್ಯವಸ್ಥೆ ಮಾಡಿದ್ದೇವೆ. ಇನ್ನಷ್ಟು ಪಾಸ್ ಒದಗಿಸುವುದರ ಜತೆಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಕೇಬಲ್ ಅಪರೇಟರ್ ಅಸೋಷಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಪ್ರಶ್ನೆಗೆ ಅಶ್ವತ್ಥನಾರಾಯಣ ಭರವಸೆ ನೀಡಿದರು.

ಐಟಿ-ಬಿಟಿ ಸಂವಾದ ಇಂದು: ಲಾಕ್​ಡೌನ್​ನಿಂದ ಐಟಿ- ಬಿಟಿ ಕ್ಷೇತ್ರದಲ್ಲಿ ತಲೆದೋರಿರುವ ಬಿಕ್ಕಟ್ಟುಗಳ ಬಗ್ಗೆ ರ್ಚಚಿಸಲು ಮಂಗಳವಾರ ಉದ್ಯಮಿಗಳು ಹಾಗೂ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net