

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮೂಲೆ ನಿವೇಶನಗಳನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಸೋಮವಾರ ನಿರ್ಧಾರ ತೆಗೆದುಕೊಂಡಿದ್ದು, 64 ಬಡಾವಣೆಗಳ ಮೂಲೆ ನಿವೇಶನ ಖರೀದಿ ಮಾಡುವವರ ಆಸೆ ಗರಿಬಿಚ್ಚಿದೆ.
ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದು, ಬಿಡಿಎ ಕಾರ್ನರ್ ಸೈಟ್ಗಳ ಮಾರಾಟದಿಂದ 15 ಸಾವಿರ ಕೋಟಿ ರೂ. ಆದಾಯ ಗಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
12,500 ಸೈಟ್ಗಳು: ಬಿಡಿಎ ವತಿಯಿಂದ ಬೆಂಗಳೂರು ವ್ಯಾಪ್ತಿಯ 544 ಹಳ್ಳಿಗಳನ್ನು ಒಳಗೊಂಡಂತೆ 64 ಲೇಔಟ್ಗಳಲ್ಲಿ 12,500 ಕಾರ್ನರ್ ಸೈಟ್ಗಳನ್ನು ಗುರುತಿಸಲಾಗಿದೆ. ಅವುಗಳು ವಿಭಿನ್ನ ಅಳತೆಯ ನಿವೇಶಗಳಾಗಿದ್ದು, ಅಳತೆ ಹಾಗೂ ನಗರದ ಕೇಂದ್ರಭಾಗಕ್ಕೆ ಇರುವ ಅಂತರದ ಆಧಾರದ ಮೇಲೆ ಬೆಲೆ ನಿಗದಿ ಮಾಡಲಾಗುವುದು. ಲಾಕ್ಡೌನ್ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ನಿವೇಶನ ಮಾರಾಟ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.
ಮೀಸಲಾತಿ, ದರದ ಬಗ್ಗೆ ಚರ್ಚೆ: ಎರಡೂ ಕಡೆ ರಸ್ತೆಗಳು, ವಿಶಾಲ ವಾತಾವರಣ, ಉತ್ತಮ ಗಾಳಿ- ಬೆಳಕು, ಸಣ್ಣ ವ್ಯಾಪಾರೋದ್ಯಮ ನಡೆಸಲೂ ಉತ್ತಮ ಅವಕಾಶದ ದೃಷ್ಟಿಕೋನದಿಂದ ಮೂಲೆ ನಿವೇಶನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಇ- ಹರಾಜಿನಲ್ಲಿ ಬಿಡ್ ಮೂಲಕ ನಿವೇಶನ ಹಂಚುವುದರಿಂದ ಯಾರು ಹೆಚ್ಚು ಹಣ ಪಾವತಿಸುತ್ತಾರೋ ಅವರಿಗೆ ನಿವೇಶನ ಸಿಗುತ್ತದೆ. ಸೈಟ್ಗಳ ಹಂಚಿಕೆ ಮೀಸಲಾತಿ, ದರ ನಿಗದಿ ಬಗ್ಗೆ ಮತ್ತೊಮ್ಮೆ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಬಿಡಿಎಗೆ ವಾಪಸ್ ಪಡೆಯುವ ಹಕ್ಕಿದೆ!: ಕಾರ್ನರ್ ಸೈಟ್ ಖರೀದಿಸಲು ಬಯಸುವವರು ಭಾರತೀಯ ಪ್ರಜೆಯಾಗಿರಬೇಕು, ಆ ಬಗ್ಗೆ ದಾಖಲೆ ಸಲ್ಲಿಸಬೇಕು. ಆನ್ಲೈನ್ನಲ್ಲಿ ಮಾತ್ರ ಖರೀದಿಸಲು ಅವಕಾಶವಿದೆ. ಅಪ್ರಾಪ್ತರು ಪಾಲಕರ ನೆರವು ಪಡೆದುಕೊಳ್ಳಬೇಕು. ಬಿಡಿಎ ನಿರ್ಧರಿಸುವ ಕನಿಷ್ಠ ಇಎಂಡಿ (ಅರ್ನೆಸ್ಟ್ ಮನಿ ಡೆಪಾಸಿಟ್) ಮೊತ್ತ ಪಾವತಿ, ಹರಾಜು ನಿವೇಶನಗಳು ಬೆಂಗಳೂರು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಜತೆಗೆ, ಹರಾಜಿನಲ್ಲಿಟ್ಟ ನಿವೇಶನಗಳನ್ನು ಯಾವುದೇ ಸಮಯದಲ್ಲಿ ವಾಪಸು ಪಡೆದುಕೊಳ್ಳುವ ಹಕ್ಕು ಬಿಡಿಎಗೆ ಇರುತ್ತದೆ ಎಂಬ ನಿಬಂಧನೆಗಳಿವೆ.
ಪ್ರತಿ ಬಾರಿಯೂ ಬಿಡಿಎ ನಿರ್ವಿುಸಿದ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ಅದರಂತೆ ನಿವೇಶನದ ಬೆಲೆ ಸೇರಿ ಕೆಲವು ನಿಬಂಧನೆಗಳಿದ್ದು, 1984ರ ಬಿಡಿಎ ನಿಯಮದ ಆಧಾರದಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಲಾಗುವುದು.
| ಜಿ.ಸಿ. ಪ್ರಕಾಶ್ ಬಿಡಿಎ ಆಯುಕ್ತ