ಶೇ.25 ಬಾಕಿ ಮೊತ್ತ ಬಿಡುಗಡೆ ಡಿಸಿಎಂ ಒಪ್ಪಿಗೆ:ಪ್ರತಿಭಟನೆ ಹಿಂಪಡೆದ ಬಿಬಿಎಂಪಿ ಗುತ್ತಿಗೆದಾರರ ಸಂಘ

93fb4a3b-9271-4b82-864d-91a2c018d430
Published on

ಬೆಂಗಳೂರು: ಕಾಮಗಾರಿಗಳಿಗೆ ಬಾಕಿ ಬಿಲ್​ ಪಾವತಿಸದ ಹಿನ್ನೆಲೆಯಲ್ಲಿ ಸೋಮವಾರದಿಂದ (ಜು.8) ಹಮ್ಮಿಕೊಂಡಿದ್ದ ಮುಷ್ಕರವನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘ, ಡಿಸಿಎಂ ಡಿ.ಕೆ.ಶಿವಕುಮಾರ್​ ಮಧ್ಯಪ್ರವೇಶದಿಂದ ತಾತ್ಕಾಲಿಕವಾಗಿ ಕೈಬಿಟ್ಟಿದೆ.

ಹಲವು ಕೆಲವು ತಿಂಗಳಿನಿಂದ ಕೋಟ್ಯಂತರ ರೂ. ಮೊತ್ತದ ಬಾಕಿ ಪಾವತಿಸುವಂತೆ ಮನವಿ ಮಾಡುತ್ತಿದ್ದರೂ ಪಾಲಿಕೆ ಸ್ಪಂದಿಸುತ್ತಿಲ್ಲ. ಈ ವಿಚಾರವಾಗಿ ಸಿಎಂ ಹಾಗೂ ಡಿಸಿಎಂರನ್ನು ಭೇಟಿಯಾಗಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿತ್ತು.ಇದನ್ನಾಧರಿಸಿ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚಿಸಿದ್ದರೂ, ಈವರೆಗೂ ಗುತ್ತಿಗೆದಾರರಿಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ. ಇದರಿಂದ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಕೊನೆಯ ಅಸ್ತ್ರವಾಗಿ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮುಂದಾಗಿದ್ದವು. ಆದರೆ, ಡಿಸಿಎಂ ಮಧ್ಯಸ್ಥಿಕೆಯಿಂದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರು (ಯೋಜನೆ), ವಿಶೇಷ ಆಯುಕ್ತರು(ಹಣಕಾಸು) ಪ್ರಧಾನ ಅಭಿಯಂತರು ಸಮ್ಮಖದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿದ್ದಾರೆ. ಬಾಕಿ ಶೇ.25 ಮೊತ್ತವನ್ನು ಬಿಡುಗೊಳಿಸಲು ಡಿಸಿಎಂ ಒಪ್ಪಿದ್ದಾರೆ. ಹಾಗಾಗಿ, ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ಡಿಕೆಶಿ ಅವರಿಗೆ ಗುತ್ತಿಗೆದಾರರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಜೆ.ಎಂ. ನಂದಕುಮಾರ್​ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಪಾಲಿಕೆಗೆ ಬಿಡುಗಡೆಯಾಗುವ ಅನುದಾನದಲ್ಲಿ ನಿರ್ವಹಿಸಿದ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತುತ ವಲಯ ಹಂತದಲ್ಲಿ ಮುಖ್ಯ ಅಭಿಯಂತರಗಳ ಮುಖೇನ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತಿತ್ತು. ಇದೀಗ ಅದನ್ನು ಮಾರ್ಪಾಡಿಸಿ ಕೇಂದ್ರ ಕಚೇರಿ ಹಂತದಲ್ಲಿಯೇ ಬಿಡುಗಡೆ ಮಾಡುವ ಪದ್ಧತಿ ಜಾರಿಗೊಳಿಸುವಂತೆ ಬಿಬಿಎಂಪಿ ಆದೇಶ ಹೊರಡಿಸಿದೆ. ಆಯಾ ವಲಯದ ಮುಖ್ಯ ಅಭಿಯಂತರಿಗೆ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರ ಹಂಚಿಕೆ ಮಾಡಲಾಗಿದ್ದು, ರ್ಯಾಂಡಮೈಸೇಷನ್​ ಪದ್ಧತಿ ಕೈಬಿಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net