ಬೈಕ್​ನಿಂದ ಬಿದ್ದು ಗೃಹಿಣಿ ಸಾವು: ಅಪಘಾತದ ಬೆನ್ನಲ್ಲೇ ಪತಿ ವಿರುದ್ಧ ಕೊಲೆ ಆರೋಪ..!

Accused
Published on

ದಾವಣಗೆರೆ: ಚಲಿಸುವ ಬೈಕ್​ನಿಂದ ಬಿದ್ದು‌ ಗೃಹಿಣಿಯೊಬ್ಬಳು ಸಾವಿಗೀಡಾಗಿರುವ ಘಟನೆ ಬಳ್ಳಾರಿಯ ಹರಪನಹಳ್ಳಿ ತಾಲೂಕಿನ ಕಂಚಿಕೇರಿಯಲ್ಲಿ ನಡೆದಿದ್ದು, ಪತಿಯೇ ಕೊಲೆ ಮಾಡಿ ಅಪಘಾತದ ನಾಟಕವಾಡುತ್ತಿದ್ದಾನೆಂದು ಮಹಿಳೆಯರು ಪಾಲಕರು ಆರೋಪಿಸಿದ್ದಾರೆ.

ಶಂಕ್ರಮ್ಮ (25) ಮೃತಪಟ್ಟ ಗೃಹಿಣಿ. ಬೈಕ್‌ನಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ನಡೆದ ಅಪಘಾತದಿಂದ ಶಂಕ್ರಮ್ಮನ ತಲೆಗೆ ಗಂಭೀರ ಪೆಟ್ಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಇದು ಅಪಘಾತವಲ್ಲ, ಕೊಲೆ ಎಂದು ಶಂಕ್ರಮ್ಮನ ತವರು ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.

ಕಂಚಿಕೇರಿ ನಿವಾಸಿ ಗೊರಪ್ಪರ ಅಣ್ಣಪ್ಪ ಹಾಗೂ ದಾವಣಗೆರೆಯ ಹಳೆ ಕುಂದವಾಡ ಗ್ರಾಮದ ಶಂಕ್ರಮ್ಮಳಿಗೂ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಎಲ್ಲವೂ ಸರಿಯಿತ್ತಂತೆ. ಆದರೆ, ನಂತರದ ದಿನಗಳಲ್ಲಿ ಪತ್ನಿಗೆ ಅಣ್ಣಪ್ಪ ಕಿರುಕುಳ ನೀಡುತ್ತಿದ್ದನಂತೆ. ನೀವು ಬಡವರು ಎಂದು ಪದೇಪದೆ ಹಿಯಾಳಿಸುತ್ತಿದ್ದನಂತೆ. ಹೀಗಾಗಿ ಆತನೇ ಕೊಲೆ ಮಾಡಿದ್ದಾನೆ ಎಂದು ಶಂಕ್ರಮ್ಮ ತಾಯಿ ಮಂಜಮ್ಮ ಆಪಾದನೆ ಮಾಡಿದ್ದಾರೆ.

ಈ ಸಂಬಂಧ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net