ಸ್ಟೇಟಸ್ ಹಾಕೋ ಮುನ್ನ ಯೋಚಿಸಿ; ರೌಡಿಶೀಟರ್, ಕಮ್ಯುನಲ್ ಗೂಂಡಾ ಕೇಸ್ ಬಿದ್ದೀತು ಎಚ್ಚರಿಕೆ..

Social Media
Published on

ಬೆಂಗಳೂರು: ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಕೋಮುಭಾವನೆ ಕೆರಳಿಸುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ, ವಿನಾಕಾರಣ ಆತಂಕ ಮೂಡಿಸುವ ಅವಹೇಳನಕಾರಿ ಅಥವಾ ಸುಳ್ಳು ಸಂದೇಶಗಳು ವಾಟ್ಸ್​ಆ್ಯಪ್ ಮಾತ್ರವಲ್ಲದೆ ಫೇಸ್​ಬುಕ್, ಟ್ವಿಟರ್​, ಇನ್​ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಹರಡುತ್ತಿದೆ.

ಬಹಳಷ್ಟು ಸಲ ಇಂಥ ಸಂದೇಶಗಳೇ ಪರಿಸ್ಥಿತಿ ಸಂಕೀರ್ಣಗೊಳ್ಳಲು, ಸುಖಾಸುಮ್ಮನೆ ಗಲಾಟೆ ಆಗಲು ಕಾರಣ ಆಗಿರುವ ಪ್ರಕರಣಗಳು ಕೂಡ ನಡೆದಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸೋಷಿಯಲ್ ಮೀಡಿಯಾ ಮೇಲೆ ಹೆಚ್ಚಿನ ನಿಗಾ ಇಡುತ್ತಿದ್ದು, ಜನರು ಸದ್ಯದ ಬೆಳವಣಿಗೆಗಳ ಕುರಿತು ಯಾವುದೇ ಸಂದೇಶ ಪೋಸ್ಟ್ ಮಾಡುವುದಿದ್ದರೂ ಸಮಚಿತ್ತದಿಂದ ಯೋಚಿಸಿ ಹಾಕುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ.

ಈ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸರು ಖಡಕ್ ಸೂಚನೆ ಹೊರಡಿಸಿದ್ದು, ಈಗ ಮಂಡ್ಯ ಜಿಲ್ಲಾ ಪೊಲೀಸರು ಕೂಡ ಅದೇ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮಾತ್ರವಲ್ಲ ಸದ್ಯದಲ್ಲೇ ಇತರ ಜಿಲ್ಲೆಗಳ ಪೊಲೀಸರು ಕೂಡ ಇದೇ ಹಾದಿ ಹಿಡಿದರೂ ಅಚ್ಚರಿ ಏನಿಲ್ಲ.

ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನಲೆಯಲ್ಲಿ ಟ್ವಿಟರ್, ಫೇಸ್​ಬುಕ್​, ವಾಟ್ಸ್​ಆ್ಯಪ್​, ಇನ್​ಸ್ಟಾಗ್ರಾಮ್​ ಮುಂತಾದ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ವಿವಾದಾತ್ಮಕ ಪೋಸ್ಟ್, ಪ್ರಚೋದನಾಕಾರಿ ಹೇಳಿಕೆ, ವಿಡಿಯೋ ಹಾಕಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಚೋದನೆ ನೀಡಿ, ಗುಂಪುಗಾರಿಕೆ, ಗಲಾಟೆ ಮಾಡಿ ಸಮಾಜದ ಶಾಂತಿ, ನೆಮ್ಮದಿಗೆ ಭಂಗ ತರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮಾತ್ರವಲ್ಲ ಅಗತ್ಯ ಬಿದ್ದರೆ ಅಂಥವರ ವಿರುದ್ಧ ರೌಡಿಶೀಟರ್, ಕಮ್ಯುನಲ್ ಗೂಂಡಾ ಶೀಟ್ ಕೂಡ ತೆರೆಯಲಾಗುವುದು. ಅಂಥವರ ಬಗ್ಗೆ ಗಮನಕ್ಕೆ ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂಬುದಾಗಿ ಮಂಡ್ಯ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net