ಈ ಜಿಲ್ಲೆಯವರು ಸ್ಟೇಟಸ್​ ಹಾಕೋ ಮುಂಚೆ ಯೋಚಿಸಿ; ರೌಡಿಶೀಟರ್​ ಕೇಸ್ ಬಿದ್ದೀತು..!

Status
Published on

ದಾವಣಗೆರೆ: ಹಿಜಾಬ್​-ಕೇಸರಿ ಸಂಘರ್ಷ ದಿನೇದಿನೆ ತಾರಕಕ್ಕೆ ಏರುತ್ತಿರುವುದಷ್ಟೇ ಅಲ್ಲ, ನಾನಾ ಬೆಳವಣಿಗೆಗೂ ಕಾರಣವಾಗುತ್ತಿದೆ. ಇದೇ ಸಂದರ್ಭದಲ್ಲಿ ಕೋಮುಭಾವನೆ ಕೆರಳಿಸುವಂಥ ಕೆಲಸ ಕೂಡ ನಡೆಯುತ್ತಿರುವುದು ಆತಂಕ ಮೂಡಿಸಿದೆ.

ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಮತೀಯ ಭಾವನೆ ಕೆರಳಿಸುವ, ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಪ್ರಕರಣಗಳೂ ಸಂಭವಿಸಿರುವುದರಿಂದ ರಾಜ್ಯದ ಕೆಲವೆಡೆ ಪೊಲೀಸರು 144 ಸೆಕ್ಷನ್​ ವಿಧಿಸಿರುತ್ತಾರೆ.

ಇನ್ನು ಇಲ್ಲೊಂದು ಜಿಲ್ಲೆಯಲ್ಲಿ ಪೊಲೀಸರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಸಾರ್ವಜನಿಕರು ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ಮುಂತಾದೆಡೆ ಸ್ಟೇಟಸ್​ ಹಾಕುವ ಮುಂಚೆ ಯೋಚಿಸಿ ಪೋಸ್ಟ್ ಮಾಡುವಂತಾಗಿದೆ.

ದಾವಣಗೆರೆ ಜಿಲ್ಲೆಯ ಯಾವುದೇ ತಾಲೂಕು-ನಗರಗಳಲ್ಲಿ ಯಾರಾದರೂ ಹಿಜಾಬ್​-ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿ ವಾಟ್ಸ್​ಆ್ಯಪ್​, ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪೋಸ್ಟರ್ ಮತ್ತು ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಕಿದಲ್ಲಿ ಅಂಥವರ ವಿರುದ್ಧ ರೌಡಿಶೀಟರ್​ ಅಥವಾ ಕಮ್ಯುನಲ್ ಗೂಂಡಾಶೀಟ್​​ಗಳನ್ನು ತೆರೆಯಲಾಗುವುದು ಎಂದು ದಾವಣಗೆರೆ ಎಸ್​ಪಿ ಸೂಚನೆ ಹೊರಡಿಸಿದ್ದಾರೆ. ಮಾತ್ರವಲ್ಲ ಅಂಥ ಸ್ಟೇಟಸ್​ಗಳು ಗಮನಕ್ಕೆ ಬಂದಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net