ಮತ್ತೊಂದು ವೃದ್ಧ ದಂಪತಿಯ ಬರ್ಬರ ಕೊಲೆ: ಇಲ್ಲೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆ!

crime
Published on

ಚಿಕ್ಕಬಳ್ಳಾಪುರ: ಎರಡು ದಿನಗಳ ಹಿಂದೆ ರಾಮನಗರ ಜಿಲ್ಲೆಯ ಪ್ರತಿಷ್ಠಿತ ಈಗಲ್​ಟನ್ ರೆಸಾರ್ಟ್​ನ ವಿಲ್ಲಾವೊಂದರಲ್ಲಿ ಏರ್​ಫೋರ್ಸ್​ನ ನಿವೃತ್ತ ಪೈಲಟ್​ ಹಾಗೂ ಅವರ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಇದೀಗ ರಾಜ್ಯದಲ್ಲಿ ಇಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. ಅದಾಗಿ ಎರಡೇ ದಿನಕ್ಕೆ ಇನ್ನೊಂದು ಶ್ರೀಮಂತ ವೃದ್ಧ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಇಲ್ಲಿಯೂ ಇಬ್ಬರನ್ನು ಬೇರೆ ಬೇರೆ ಕೋಣೆಗಳಲ್ಲಿ ಕೊಲ್ಲಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಈ ಕೊಲೆ ನಡೆದಿದೆ. ಇಲ್ಲಿನ ಕಾಮಾಟಿಗರ ಪೇಟೆಯಲ್ಲಿರುವ ಬಟ್ಟೆ ವ್ಯಾಪಾರಿ ಶ್ರೀನಿವಾಸಲು (77) ಮತ್ತು ಅವರ ಪತ್ನಿ ಪದ್ಮಾವತಮ್ಮ (70) ಕೊಲೆಯಾದವರು. ಇಂದು ಬೆಳಗ್ಗೆ ಮನೆಗೆಲಸದವರು ಬಂದು ನೋಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಶ್ರೀನಿವಾಸಲು ಅವರು ಶ್ರೀಮಂತರಾಗಿದ್ದು, ಹೆಣ್ಣು ಮಕ್ಕಳಿಬ್ಬರನ್ನು ಮದುವೆ ಮಾಡಿಕೊಟ್ಟಿದ್ದು, ಹಳೇ ಕಾಲದ ತಮ್ಮ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಆದರೆ ಅವರನ್ನು ಕೊಂದ ದುಷ್ಕರ್ಮಿಗಳು ಮನೆಯಲ್ಲಿದ್ದ ನಗದು ಚಿನ್ನಾಭರಣ ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಶ್ರೀನಿವಾಸುಲು ಅವರನ್ನು ಬಾತ್​ರೂಮ್​ನಲ್ಲಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಅವರ ಪತ್ನಿಯನ್ನು ಹಾಲ್​ನಲ್ಲಿ ಹತ್ಯೆ ಮಾಡಿದ್ದಾರೆ. ಮೇಲ್ನೋಟಕ್ಕೆ ಗೋಡೆಗೆ ತಲೆ ಅಪ್ಪಳಿಸಿ ಅಥವಾ ಬೇರೆ ವಸ್ತುವಿನಿಂದ ತಲೆಗೆ ಹೊಡೆದು ಸಾಯಿಸಿರಬಹುದು ಎಂಬುದು ಕಂಡುಬಂದಿದೆ.

ಬೆಳಗ್ಗೆ ಬಂದಿದ್ದ ಮನೆಗೆಲಸದವರು, ಬಾಗಿಲು ತೆರೆಯದಿದ್ದರಿಂದ ಹಿಂಬದಿಗೆ ಹೋಗಿ ನೋಡಿದಾಗ ಇನ್ನೊಂದು ಬಾಗಿಲು ತೆರೆದಿಟ್ಟಿರುವುದು ಕಾಣಿಸಿತ್ತು. ಅನುಮಾನದಿಂದ ಒಳಕ್ಕೆ ಹೋಗಿ ನೋಡಿದಾಗ ಕೊಲೆ ನಡೆದಿರುವುವುದು ಕಂಡುಬಂದಿದೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​ಪಿ ಜಿ.ಕೆ.ಮಿಥುನ್​ಕುಮಾರ್​ ಹಾಗೂ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಮನೆಯ ಮೇಲಿನ ಕಿಟಕಿ ಮೂಲಕ ಒಳಕ್ಕೆ ಬಂದಿದ್ದು, ದಂಪತಿಯನ್ನು ಹತ್ಯೆ ಮಾಡಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net