

ರಾಮನಗರ: ಪ್ರತಿಷ್ಠಿತ ರೆಸಾರ್ಟ್ನ ವಿಲ್ಲಾವೊಂದರಲ್ಲಿ ನೆಲೆಸಿದ್ದ ದಂಪತಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಇಬ್ಬರೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆಗೀಡಾಗಿದ್ದಾರೆ.
ಆಶಾ (63), ರಘುರಾಜ್ (70) ಹತ್ಯೆಗೀಡಾದ ದಂಪತಿ. ರಘುರಾಜ್ ಏರ್ಫೋರ್ಸ್ ಪೈಲಟ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಇವರು ಈಗಲ್ಟನ್ ರೆಸಾರ್ಟ್ನ ಸಿ ಬ್ಲಾಕ್ನ ವಿಲ್ಲಾವೊಂದರಲ್ಲಿ ವಾಸವಿದ್ದರು. ಮನೆಯ ಎರಡು ಪ್ರತ್ಯೇಕ ಕೋಣೆಗಳಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ.
ಕೆಲವು ವರ್ಷಗಳಿಂದ ಈ ದಂಪತಿ ಇಲ್ಲಿ ವಾಸವಿದ್ದು, ಹಣಕ್ಕಾಗಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ವಿಲ್ಲಾ ಭದ್ರತೆಗೆ ನಿಯೋಜಿಸಲಾಗಿದ್ದ ಸೆಕ್ಯುರಿಟಿ ಗಾರ್ಡ್ ಬಗ್ಗೆಯೂ ಅನುಮಾನ ಮೂಡಿದೆ.
ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ. ರಾಮನಗರ ಎಸ್ಪಿ ಸಂತೋಷ್ ಬಾಬು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಶ್ವಾನದಳವನ್ನೂ ಕರೆಸಲಾಗಿದೆ.