ಪುತ್ತೂರು ಗ್ರಾಮಾಂತರದಲ್ಲಿ ವಿವಿಧೆಡೆ ಹಾನಿ

Published on

ಪುತ್ತೂರು ಗ್ರಾಮಾಂತರ: ಭಾರಿ ಮಳೆಗಾಳಿಯಿಂದಾಗಿ ಪುತ್ತೂರು ಗ್ರಾಮಾಂತರ ಪ್ರದೇಶದ ಹಲವೆಡೆ ಮರಗಳು ಉರುಳಿ ಬಿದ್ದು, ಧರೆ ಕುಸಿತವಾಗಿ ರಸ್ತೆ ಸಂಚಾರಕ್ಕೆ ಅಡಚಣೆಯಾದ, ಮನೆಗಳಿಗೆ ಹಾಗೂ ಹಾನಿಯಾದ ಮತ್ತು ಕೃಷಿ ನಾಶ, ವಿದ್ಯುತ್ ವ್ಯತ್ಯಯ ಉಂಟಾಯಿತು.

ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಣ್ಣು ನಾಯ್ಕ ಮನೆಯ ಪಕ್ಕದ ಧರೆ ಕುಸಿದು ಮನೆಯ ಗೋಡೆಗೆ ಹಾನಿಯಾಗಿದೆ. ಪಾಣಾಜೆ ಗ್ರಾಮದ ಎಣ್ಣೆಗದ್ದೆ ನಿವಾಸಿ ಅಬ್ದುಲ್ ಅಝೀಝ್ ಎಂಬುವರ ಮನೆಯ ಪಕ್ಕದಲ್ಲಿರುವ ಬಾವಿ ಕುಸಿದಿದೆ.

ಧರೆ ಕುಸಿದು ರಸ್ತೆ ಬಂದ್

ಪರನೀರುಸಸ್ಪೇಟಿ ರಸ್ತೆಯ ಸಲ್ಪೇಟಿ ಎಂಬಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅರಿಯಡ್ಕ ಗ್ರಾಮದ ಗುಂಡ್ಯಡ್ಕ, ವಾಯಿಲಕೊಚ್ಚಿ, ಶೇಷಗಿರಿ, ಕುಂಟಾಪು ಮೊದಲಾದ ಕಡೆಗಳಲ್ಲಿ ಮರಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ನಿಡ್ಪಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ

ನಿಡ್ಪಳ್ಳಿ ಗ್ರಾಪಂ ವ್ಯಾಪ್ತಿಯ ಪಳಂಬೆಕುಡ್ಚಿಲ ರಸ್ತೆಯ ಪಳಂಬೆ ಎಂಬಲ್ಲಿ ಸೋಮವಾರ ಬೆಳಗ್ಗೆ ರಸ್ತೆ ಬದಿಯ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದ್ದು, ಇದರಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಮರ ವಿದ್ಯುತ್ ಲೈನಿನ ಮೇಲೆ ಉರುಳಿರುವ ಪರಿಣಾಮವಾಗಿ 3 ವಿದ್ಯುತ್ ಕಂಬಗಳು ಧಾರಾಶಾಹಿಯಾಗಿವೆ. ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರವನ್ನು ತೆರವುಗೊಳಿಸಲಾಯಿತು.

ಧರೆ ಇನ್ನಷ್ಟೂ ಕುಸಿಯುವ ಸಾಧ್ಯತೆ

ಪುತ್ತೂರು - ಪಾಣಾಜೆ ರಸ್ತೆಯ ರೆಂಜದಿಂದ ಕೌಡಿಚ್ಚಾರು - ಸುಳ್ಯಪದವು ರಸ್ತೆಯ ಮುಡ್ಪಿನಡ್ಕಕ್ಕೆ ಸಂಪರ್ಕ ಕಲ್ಪಿಸುವ ರೆಂಜ-ಮುಡ್ಪಿನಡ್ಕ ರಸ್ತೆಯಲ್ಲಿ ರೆಂಜ ಸಮೀಪ ರಸ್ತೆ ಬದಿಯ ಧರೆ ಕುಸಿದಿದೆ. ಕುಸಿದು ಬಿದ್ದ ಮಣ್ಣಿನಿಂದಾಗಿ ರಸ್ತೆ ಬದಿಯ ಚರಂಡಿ ಮುಚ್ಚಿಹೋಗಿ ಮಳೆನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಈ ಭಾಗದಲ್ಲಿ ಧರೆ ಇನ್ನಷ್ಟೂ ಕುಸಿಯುವ ಸಾಧ್ಯತೆ ಎದುರಾಗಿದೆ.

ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಣ್ಣು ನಾಯ್ಕ ಮನೆಯ ಪಕ್ಕದ ಧರೆ ಕುಸಿದು ಮನೆಯ ಗೋಡೆಗೆ ಹಾನಿಯಾಗಿರುವುದು.
ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಅಣ್ಣು ನಾಯ್ಕ ಮನೆಯ ಪಕ್ಕದ ಧರೆ ಕುಸಿದು ಮನೆಯ ಗೋಡೆಗೆ ಹಾನಿಯಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net