

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆ ಸೋಮವಾರವೂ ಮುಂದುವರಿದಿದ್ದು, ಕೆಲವೆಡೆ ಹಾನಿ ಉಂಟಾಗಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಅರ್ಬಿಗುಡ್ಡೆ ಎಂಬಲ್ಲಿ ಗುಡ್ಡ ಜರಿದು ಸಲೀಂ ಮನೆಗೆ ಸಂಪರ್ಕಿಸುವ ಕಾಲು ದಾರಿ ಮುಚ್ಚಿ ಹೋಗಿದೆ. ಮೇರಮಜಲು ಗ್ರಾಮದ ಪಕ್ಕಳಪಾದೆ ಅಂಗನವಾಡಿ ಕೇಂದ್ರಕ್ಕೆ ತಾಗಿಕೊಂಡಿರುವ ಧರೆ ಕುಸಿದಿದ್ದು, ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿದೆ. ಇದೇ ರೀತಿ ಮಳೆ ಮುಂದುವರಿದರೆ ಅಂಗನವಾಡಿ ಕೇಂದ್ರದ ಅಡಿಪಾಯ ಕುಸಿಯುವ ಆತಂಕ ಎದುರಾಗಿದೆ.
ಅಮ್ಟಾಡಿ ಗ್ರಾಪಂ ವ್ಯಾಪ್ತಿಗೊಳಪಟ್ಟ ಲೊರೆಟ್ಟೋ ಪದವು ಎಂಬಲ್ಲಿ ಬಂಟ್ವಾಳ- ಮೂಡುಬಿದಿರೆ ರಾಜ್ಯ ಹೆದ್ದಾರಿ ಬಳಿ ಇರುವ ಎಂಆರ್‌ಪಿಎಲ್‌ನ ಟ್ಯಾಂಕ್ ಸುತ್ತ ಮಣ್ಣು ಕುಸಿಯುತ್ತಿದ್ದು ಟ್ಯಾಂಕ್ ಅಪಾಯಕ್ಕೆ ಸಿಲುಕಿದೆ. ಇದರ ಪಕ್ಕವೇ ಮುತ್ತು ಗಿರಿಯಪ್ಪ ಎಂಬುವರ ಮನೆ ಇದ್ದು ಮನೆ ಮಂದಿಗೂ ಆತಂಕ ಎದುರಾಗಿದೆ. ಸ್ಥಳಕ್ಕೆ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮ್ಮುಂಜೆ ಗ್ರಾಪಂ ವ್ಯಾಪ್ತಿಯ ಆಲಾಡಿ, ಬಾರಿಂಜೆ ಪ್ರದೇಶದಲ್ಲಿ ನೀರು ತುಂಬಿಕೊಂಡು ಕೃತಕ ನೆರೆ ಸೃಷ್ಟಿಯಾಗಿದ್ದು, ಜೆಸಿಬಿ ಮೂಲಕ ಕಸ ತೆರವುಗೊಳಿಸಿ ಸುಗಮವಾಗಿ ನೀರು ಹರಿಯಲು ವ್ಯವಸ್ಥೆ ಕಲ್ಪಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
ಬಂಟ್ವಾಳದ ಪಾಣೆಮಂಗಳೂರು ಹೋಬಳಿಯ ಬೋಳಂಗಡಿ ಎಂಬಲ್ಲಿ ಭಾಸ್ಕರ ಶೆಣೈ ಎಂಬುವರ ಮನೆಗೆ ಮಳೆ ನೀರು ನುಗ್ಗಿ ಆತಂಕದ ಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಪಂಪ್ ಮೂಲಕ ಮನೆಯಿಂದ ನೀರನ್ನು ಹೊರಹಾಕಿದ್ದಾರೆ.