

ಪ್ರವೀಣ್ರಾಜ್ ಕೈೊಲ ಕಡಬ
ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದರೂ ಕಡಬ ಪಟ್ಟಣ ಪಂಚಾಯಿತಿ ಮಳೆಗಾಲಕ್ಕೆ ಸನ್ನದ್ಧವಾಗಿಲ್ಲ. ಚರಂಡಿ ದುರಸ್ತಿ ಇನ್ನೂ ನಡೆದಿಲ್ಲ..!
ಮಳೆಗಾಲ ಆರಂಭಕ್ಕೆ ಕಡಬ ಪೇಟೆ ಹಾಗೂ ಪರಿಸರದಲ್ಲಿ ಕೆಲವು ಕಡೆ ರಸ್ತೆ ಬದಿಯಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಮಳೆನೀರು ರಸ್ತೆಯಲ್ಲಿಯೇ ಹರಿದುಹೋಗುತ್ತಿದ್ದರೆ, ಪೇಟೆಯ ಚರಂಡಿಗಳಲ್ಲಿ ಸಂಗ್ರಹವಾದ ಮಳೆನೀರು ತೋಡುಗಳಿಗೆ ಹರಿದುಹೋಗುವ ದಾರಿಗಳಲ್ಲಿ ಪೊದೆ, ಗಿಡಗಂಟಿಗಳು ಬೆಳೆದು ಕಸಕಡ್ಡಿಗಳು ಸೇರಿಕೊಂಡು ನೀರಿನ ಹರಿವಿಗೆ ತಡೆಯಾಗುತ್ತಿವೆ.
ಮಳೆಗಾಲ ಆರಂಭವಾಗುವ ಮೊದಲೇ ನೀರು ಹರಿದು ಹೋಗುವ ಮಾರ್ಗಗಳಲ್ಲಿನ ತೊಡಕುಗಳನ್ನು ನಿವಾರಿಸಿಲ್ಲ. ಕಡಬ ಪೇಟೆ ಬೆಳೆಯುತ್ತಿರುವುದರಿಂದ ಈಗಿನ ಒಳಚರಂಡಿ ವ್ಯವಸ್ಥೆ ಏನೇನೂ ಸಾಲದು. ಪೇಟೆಯಲ್ಲಿನ ಚರಂಡಿಗಳಿಂದ ಹರಿಯುವ ಮಳೆನೀರು ಕಡಬ ಪೇಟೆಯ ಒಂದು ಭಾಗದ ಹರಿಯುವ ತೋಡಿಗೆ ಸೇರುತ್ತದೆ. ಚರಂಡಿಗಳಲ್ಲಿ ಹೂಳು ಹಾಗೂ ಕಸಕಡ್ಡಿಗಳು ಸೇರಿಕೊಂಡಿವೆ. ಹೂಳೆತ್ತಿದರೆ ತಕ್ಷಣದ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಕಡಬ ಪೇಟೆ ಸನಿಹದಲ್ಲಿರುವ ಅಂಗಡಿ ಮನೆ ಕಾಲನಿ ಬಳಿಯ ದ್ರವ ತ್ಯಾಜ್ಯ ಸಂಸ್ಕರಣಾ ಘಟಕದ ಪಕ್ಕದಿಂದ ಬೈಲಿನ ಕಡೆಗೆ ಮಳೆನೀರು ಹರಿದುಹೋಗುವ ಸಣ್ಣ ತೋಡಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಗಿಡಗಂಟಿಗಳು ಹಾಗೂ ಹೂಳು ತುಂಬಿಕೊಂಡಿವೆ. ಕಾಲನಿಯಿಂದ ಹರಿದುಬರುವ ಕೊಳಚೆನೀರು ಅಲ್ಲಲ್ಲಿ ಸಂಗ್ರಹವಾಗಿದ್ದು, ದುರ್ವಾಸನೆಗೆ ಕಾರಣವಾಗುತ್ತಿದೆ. ಕಡಬ ಪೇಟೆಯ ಸಂತೆಕಟ್ಟೆಯ ಪರಿಸರದ ಚರಂಡಿಗಳ ನೀರು ಹರಿದು ತೋಡು ಸೇರುವಲ್ಲಿ ಪೂರ್ತಿ ಗಿಡಗಂಟಿಗಳು ಬೆಳೆದು ನೀರಿನ ಹರಿವಿಗೆ ತಡೆಯುಂಟಾಗಿದೆ.
ಪೇಟೆ ಪರಿಸರದಲ್ಲಿ ಕೃತಕ ನೆರೆ
ಪೇಟೆಯಲ್ಲಿ ಕೆಲವು ಕಡೆ ಚರಂಡಿಯಲ್ಲಿಯೇ ಕುಡಿಯುವ ನೀರಿನ ಪೈಪ್ಗಳು ಹಾದು ಹೋಗಿರುವುದರಿಂದ ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಸಕಡ್ಡಿ ಸಿಲುಕಿಕೊಂಡು ನೀರು ಹರಿದುಹೋಗಲು ತೊಡಕಾಗಿದೆ. ಕಡಬ ಪೇಟೆಯ ಅಡ್ಡಗದ್ದೆ ಕಾಲೇಜು ರಸ್ತೆ, ಪಂಜ ರಸ್ತೆಯಲ್ಲಿಯೂ ಮಳೆನೀರು ಹರಿದುಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆನೀರು ರಸ್ತೆಯಲ್ಲಿಯೇ ಹರಿದು ಕೃತಕ ನೆರೆ ಉಂಟಾಗುತ್ತಿದೆ. ಮಳೆನೀರು ಹರಿದು ಹೋಗಲು ರಸ್ತೆಯ ಬದಿಯಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಜತೆಗೆ ಕೆಲವು ಕಡೆ ಅಂಗಡಿ ಕಟ್ಟಡ ಹಾಗೂ ಮನೆಗಳ ಮುಂದಿನ ರಸ್ತೆ ಬದಿ ಚರಂಡಿಗಳನ್ನು ಮುಚ್ಚಿದ ಪರಿಣಾಮ ಮಳೆನೀರು ರಸ್ತೆಯಲ್ಲೇ ಹರಿದು ರಸ್ತೆಗೆ ಹಾನಿಯಾಗುತ್ತಿದೆ.
ಕಡಬ ಪಟ್ಟಣ ಪಂಚಾಯಿತಿಯ ಕಡಬ ಮತ್ತು ಕೋಡಿಂಬಾಳ ಗ್ರಾಮದ ಪೇಟೆ ಪರಿಸರ ಮಾತ್ರವಲ್ಲದೆ 13 ವಾರ್ಡ್ಗಳಲ್ಲಿ ಹಲವೆಡೆ ಚರಂಡಿಗಳ ಸಮರ್ಪಕ ದುರಸ್ತಿಗಾಗಿ 15 ಲಕ್ಷ ರೂ. ಅನುದಾನ ಬೇಕಾಗಬಹುದು. ತಕ್ಷಣ ಟೆಂಡರ್ ಕರೆದು ಈ ತಿಂಗಳ ಕೊನೆಯೊಳಗೆ ತೋಡುಗಳಲ್ಲಿನ ತ್ಯಾಜ್ಯ, ಗಿಡಗಂಟಿ ತೆರವು ಹಾಗೂ ಹೂಳೆತ್ತುವ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಲಾಗುವುದು. ಲೀಲಾವತಿ ಇ., ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯಿತಿ https://www.vijayavani.net/lokayukta-invited-to-gram-sabha