

ವಿಜಯವಾಣಿ ಸುದ್ದಿಜಾಲ ಕುಂಬಳೆ
ಜನಸಾಮಾನ್ಯರು ಹೊಸ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಈಗಿರುವ ಸಂಪರ್ಕ ಬದಲಾವಣೆ ಮಾಡಿಕೊಳ್ಳಲು ವಿದ್ಯುತ್ ಶುಲ್ಕವನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ಗಣನೀಯವಾಗಿ ಇಳಿಸಿದೆ. ವಿದ್ಯುತ್ ಸಂಪರ್ಕ ಶುಲ್ಕದಲ್ಲಿ ಶೇ.90ರಷ್ಟು ಇಳಿಕೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಅ.12ರಿಂದ ಜಾರಿಗೆ ಬಂದಿವೆ. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ನಿರ್ದೇಶನದಂತೆ ಈ ಬದಲಾವಣೆ ಮಾಡಲಾಗಿದೆ.
ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ನಿರ್ಮಿಸುವವರು ಮತ್ತು ಸಣ್ಣ ಉದ್ಯಮಿಗಳು ವಿದ್ಯುತ್ ಕಂಬ ಹಾಗೂ ಲೈನ್ ಅಳವಡಿಸಲು ದೊಡ್ಡ ಮೊತ್ತ ಪಾವತಿಸಬೇಕಾದ ಪರಿಸ್ಥಿತಿಯಿತ್ತು. ಹೊಸ ದರ ಜಾರಿಯಿಂದ ಆರ್ಥಿಕ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ.
ಹಿಂದೆ ನಾಲ್ಕು ವಿದ್ಯುತ್ ಕಂಬಗಳು ಹಾಗೂ 200 ಮೀಟರ್ ಓವರ್ಹೆಡ್ ವಿದ್ಯುತ್ ಲೈನ್ ಅಳವಡಿಸಿ ಸಂಪರ್ಕ ನೀಡಲು 51,425 ರೂ. ವೆಚ್ಚವಾಗುತ್ತಿತ್ತು. ಪರಿಷ್ಕೃತ ವ್ಯವಸ್ಥೆಯಲ್ಲಿ ಕೇವಲ 5,000 ರೂ.ಗೆ ಸಂಪರ್ಕ ಪಡೆಯಬಹುದಾಗಿದೆ.
ಹಿಂದೆ ಹೊಸ ವಿದ್ಯುತ್ ಕಂಬ, ಲೈನ್ ಅಥವಾ ಟ್ರಾನ್ಸ್ಫಾರ್ಮರ್ ಅಳವಡಿಸುವ ಸಂಪೂರ್ಣ ವೆಚ್ಚವನ್ನು ಗ್ರಾಹಕರೇ ಭರಿಸಬೇಕಾಗಿತ್ತು. ಆದರೆ ಈಗ ಸಂಪರ್ಕಕ್ಕೆ ಅಗತ್ಯವಿರುವ ಲೋಡ್ ಆಧರಿಸಿ ನಿಗದಿಪಡಿಸಿದ ಶುಲ್ಕ ಪಾವತಿಸಿದರೆ ಸಾಕು. ಸ್ಥಳ ಪರಿಶೀಲನೆಯಿಲ್ಲದೆ ಅರ್ಜಿ ಶುಲ್ಕದೊಂದಿಗೆ ನಿಗದಿತ ಮೊತ್ತ ಪಾವತಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಪ್ರಸ್ತುತ ಸಂಪರ್ಕದ ಒಟ್ಟು ಲೋಡ್ನಲ್ಲಿ ಬದಲಾವಣೆ ಇಲ್ಲದೆ ಸಿಂಗಲ್ ಫೇಸ್ನಿಂದ ತ್ರೀ ಫೇಸ್ಗೆ ಬದಲಾಯಿಸಲು ಪ್ರತಿ ಕಿಲೋವಾಟ್ಗೆ 700 ರೂ. ಪಾವತಿಸಿದರೆ ಸಾಕು. ಫೇಸ್ ಬದಲಾವಣೆಯಿಂದ ಒಟ್ಟು ಸಂಪರ್ಕದ ಲೋಡ್ 10 ಕಿಲೋವಾಟ್ಗಿಂತ ಹೆಚ್ಚಾದರೆ ಹೆಚ್ಚುವರಿ ಲೋಡ್ಗೆ ಸಂಬಂಧಿಸಿದ ಶುಲ್ಕವನ್ನು ಮಾತ್ರ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೂ ಪರಿಷ್ಕೃತ ದರ ವ್ಯವಸ್ಥೆಯಿಂದ ಪ್ರಯೋಜನವಾಗಲಿದೆ. ರಿಂಗ್ ಮೇನ್ ಯೂನಿಟ್ (ಆರ್ಎಂಯು) ಅಗತ್ಯವಿಲ್ಲದ ಹೈಟೆನ್ಶನ್ ವಿದ್ಯುತ್ ಸಂಪರ್ಕಗಳಿಗೆ ಪ್ರತಿ ಕೆವಿಎಗೆ 1,800 ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ವಿಭಾಗದಲ್ಲಿ ಪಾವತಿಸಬೇಕಾದ ಗರಿಷ್ಠ ಮೊತ್ತವನ್ನು 5 ಲಕ್ಷ ರೂ.ಗೆ ಮಿತಿಗೊಳಿಸಲಾಗಿದೆ. ಹೊಸ ದರ ವ್ಯವಸ್ಥೆಯಿಂದ ವಿದ್ಯುತ್ ಸಂಪರ್ಕ ಪಡೆಯುವ ಆರಂಭಿಕ ವೆಚ್ಚ ಕಡಿಮೆಯಾಗಲಿದ್ದು, ಗ್ರಾಮೀಣ ವಿದ್ಯುದ್ಧೀಕರಣ, ಕೃಷಿ, ಸಣ್ಣ ಉದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.