

ಬೀದರ್: ಮನೆಯಲ್ಲಿ ಹೆರಿಗೆ ಮಾಡಿಸುವುದರಿಂದ ಅನಾಹುತಗಳು ಆಗುವ ಸಾಧ್ಯತೆಗಳಿದ್ದು, ತಾಯಿ ಮತ್ತು ಮಗುವಿನ ಮರಣ ತಪ್ಪಿಸಲು ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಹಿತಿ ಶಿಕ್ಷಣ ಸಂವಹನ ವಿಭಾಗದಿಂದ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಂಸ್ಥಿಕ ಹೆರಿಗೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಸ್ಥಿಕ ಹೆರಿಗೆ ಮಾಡಿಸಲು ಸಾರ್ವಜನಿಕರು ಆದ್ಯತೆ ಕೊಡಬೇಕು ಎಂದರು.
ಕಡ್ಡಾಯವಾಗಿ ಗಭರ್ಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಹೆರಿಗೆ ನಂತರ ತಕ್ಷಣ ಮನೆಗೆ ಕರೆದುಕೊಂಡು ಹೋಗುವುದನ್ನು ಕೂಡ ತಪ್ಪಿಸಬೇಕು. ವೈದ್ಯರ ಸಲಹೆ ವಿರುದ್ಧ ನಡೆದುಕೊಳ್ಳಬಾರದು. ಸಾಂಸ್ಥಿಕ ಹೆರಿಗೆಗಳ ಬಗ್ಗೆ ತಿಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಆಸ್ಪತ್ರೆಯಲ್ಲಿ ಹೆರಿಗೆ ಆಗುವುದರಿಂದ ಹಲವಾರು ಸೌಕರ್ಯಗಳು ಸಿಗುತ್ತವೆ ಎಂಬ ಬಗ್ಗೆಯೂ ಜನರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ. ರೆಡ್ಡಿ ಮಾತನಾಡಿ, ಆಸ್ಪತ್ರೆಯಲ್ಲಿ ಹೆರಿಗೆ ಆಗುವುದರಿಂದ ಜನನಿ ಸುರಕ್ಷಾ ಯೋಜನೆ ಅನುಕೂಲಗಳಾದ 700 ರೂ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ 600 ರೂ. ಸಹಾಯಧನ ಸಿಗಲಿದೆ. ತಾಯಿ ಮತ್ತು ಮಗುವಿಗೆ ಉಚಿತ ಚಿಕಿತ್ಸೆ, ಔಷಧ ಸಿಗಲಿದೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ಕೋರಿದರು.
ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ವೈದ್ಯಾಧಿಕಾರಿಗಳಾದ ಡಾ.ಅನಿಲಕುಮಾರ ಚಿಂತಾಮಣಿ, ಡಾ.ರವೀಂದ್ರ ಸಿರಸಗೆ, ಡಾ.ಉಮಾ ದೇಶಮುಖ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ತಿಪ್ಪಣ್ಣ ಸಿರಸಗಿ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಸಂಗಪ್ಪ ಕಾಂಬ್ಳೆ, ಪೋಷಣ ಅಭಿಯಾನ ಸಹಾಯಕ ಸಂಯೋಜಕ ಪ್ರಿಯಾಂಕ ಪಾಟೀಲ್, ಯೋಗೇಶ್ವರಿ ಸ್ವಾಮಿ ಇತರರಿದ್ದರು.