

ಬೆಂಗಳೂರು: ಎರಡು ಕೋಟಿ ರೂ. ಬಹುಮಾನದ ಆಸೆ ತೋರಿಸಿದ ಸೈಬರ್ ಕಳ್ಳರು ವ್ಯಕ್ತಿಗೆ 20 ಸಾವಿರ ರೂ. ವಂಚಿಸಿದ್ದಾರೆ. ಗೊಲ್ಲರಹಟ್ಟಿ ಸಮೀಪ ಅಂಜನಾನಗರದ ಎಂ. ಕುಮಾರ್ ವಂಚನೆಗೊಳಗಾದವರು.
ಕೆಲ ದಿನಗಳ ಹಿಂದೆ ವಂಚಕರು ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕುಮಾರ್ಗೆ ಕರೆ ಮಾಡಿ ನಿಮಗೆ ಲಾಟರಿಯಲ್ಲಿ 2 ಕೋಟಿ ರೂ. ಬಹುಮಾನ ಬಂದಿದೆ. ನೀವು ಹಣ ಪಡೆಯಲು ಕೆಲ ಶುಲ್ಕಗಳನ್ನು ಪಾವತಿಸಬೇಕಿದೆ ಎಂದಿದ್ದಾರೆ.
ಅಂತೆಯೇ ಅವರು ಸೂಚಿಸಿದ ಅತುಲ್ ಕುಮಾರ್ ಎಂಬಾತನ ಬ್ಯಾಂಕ್ ಖಾತೆಗೆ ಹಂತಹಂತವಾಗಿ 20,500 ರೂ.ಗಳನ್ನು ಕುಮಾರ್ ಜಮೆ ಮಾಡಿದ್ದಾರೆ. ಆದರೆ ಈ ಹಣ ಸಂದಾಯವಾದ ಬಳಿಕ ವಂಚಕರು ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಮಾರ್ ದೂರು ನೀಡಿದ್ದು ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.