

ಹಾಗೆಲ್ಲಾ ಸುಖಾಸುಮ್ಮನೆ ಟೈಂ ವೇಸ್ಟ್ ಮಾಡುವ ಮನುಷ್ಯನೇ ಅಲ್ಲ ಅಕ್ಷಯ್ ಕುಮಾರ್, ಸದಾ ಒಂದಿಲ್ಲೊಂದು ಚಿತ್ರದಲ್ಲಿ ತೊಗಡಿಸಿಕೊಂಡಿರುವ ಅಕ್ಷಯ್ ಅವರ ವೇಗಕ್ಕೆ ಲಾಕ್ಡೌನ್ನಿಂದ ಬ್ರೇಕ್ ಬಿದ್ದ ಹಾಗಾಗಿದೆ.
ಇಷ್ಟರಲ್ಲಿ ಏನಿಲ್ಲವೆಂದರೂ, ಅಕ್ಷಯ್ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿ, ಇನ್ನೂ ಎರಡು ಚಿತ್ರಗಳ ಚಿತ್ರೀಕರಣ ಮುಗಿದಿರಬೇಕಿತ್ತು. ಮೊದಲೇ ಹೇಳಿದಂತೆ, ಅದೆಲ್ಲಕ್ಕೂ ಲಾಕ್ಡೌನ್ ಅಡ್ಡಗಾಲು ಹಾಕಿದೆ.
ಹಾಗಂತ ಸುಮ್ಮನಿರುವ ಪೈಕಿಯಲ್ಲ ಅಕ್ಷಯ್. ಇಷ್ಟು ದಿನ ಸುಮ್ಮನೆ ಸಮಯ ವೇಸ್ಟ್ ಆಗಿದೆ ಎಂಬ ಪಾಪಪ್ರಜ್ನೆ ಅವರನ್ನು ಕಾಡುತ್ತಿರುವಂತಿದೆ. ಅದೇ ಕಾರಣಕ್ಕೆ, ಉಳಿದಿರುವ ಐದು ತಿಂಗಳುಗಳಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳನ್ನು ಮುಗಿಸುವುದಕ್ಕೆ ಅಕ್ಷಯ್ ಮುಂದಾಗಿದ್ದಾರೆ.
ಮೊದಲ ಹಂತವಾಗಿ, ಆಗಸ್ಟ್ನಿಂದ 'ಬೆಲ್ ಬಾಟಮ್' ಚಿತ್ರದ ಚಿತ್ರೀಕರಣ ಶುರುವಾಗಲಿದೆ. ಲಾಕ್ಡೌನ್ ನಂತರ ಫಾರಿನ್ನಲ್ಲಿ ಚಿತ್ರೀಕರಣವಾಗಲಿರುವ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಸ್ಕಾಟ್ಲ್ಯಾಂಡ್ನಲ್ಲಿ ಸುಮಾರು ಒಂದು ತಿಂಗಳ ಕಾಲ, ಈ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಭಾರತದಲ್ಲಿ ಕೆಲವೇ ದಿನಗಳ ಚಿತ್ರೀಕರಣ ಮಾತ್ರ ಮಾಡಲಾಗುತ್ತದಂತೆ. ಎಲ್ಲಾ ಅಂದುಕೊಂಡಂತೆ ಆದರೆ, ಅಕ್ಟೋಬರ್ ಒಳಗೆ ಈ ಚಿತ್ರದ ಚಿತ್ರೀಕರಣ ಮುಗಿಯಲಿದೆ.
ಇನ್ನು, ಇದರ ನಂತರ ಯಶ್ರಾಜ್ ಫಿಲಂಸ್ನವರ 'ಪೃಥ್ವಿರಾಜ್' ಚಿತ್ರದ ಚಿತ್ರೀಕರಣ ನಡೆಯಲಿದೆ. ಈಗೇಗಲೇ ಈ ಚಿತ್ರಕ್ಕೆ ಶೇ 60ರಷ್ಟು ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅಕ್ಟೋಬರ್ ನಂತರ ಈ ಚಿತ್ರದ ಚಿತ್ರೀಕರಣ ಮುಂದುವರೆಯಲಿದೆ. ದೊಡ್ಡ ತಂಡವಾದ್ದರಿಂದ, ಕರೋನಾ ಹಾವಳಿ ಸ್ವಲ್ಪ ತಗ್ಗೆದ ನಂತರ ಅಕ್ಟೋಬರ್ ಕೊನೆಯ ಹೊತ್ತಿಗೆ ಈ ಚಿತ್ರದ ಚಿತ್ರೀಕರಣದಲ್ಲಿ ಅಕ್ಷಯ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇನ್ನು ಆನಂದ್ ರೈ ನಿರ್ದೇಶನದ 'ಅತರಂಗಿ ರೇ' ಚಿತ್ರಕ್ಕೇ ಕೆಲವು ದಿನಗಳ ಕಾಲ ಚಿತ್ರೀಕರಣ ಮಾಡುವ ಅವಶ್ಯಕತೆ ಇದ್ದು, ಈ ವರ್ಷದ ಕೊನೆಗೆ ಅಕ್ಷಯ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಇದು ಮುಗಿಯುತ್ತಿದ್ದಂತೆಯೃ, ಸಾಜಿದ್ ನಡಿಯಾಡ್ವಾಲಾ ನಿರ್ಮಾಣದ 'ಬಚ್ಚನ್ ಪಾಂಡೆ' ಚಿತ್ರದ ಚಿತ್ರೀಕರಣಕ್ಕೆ ಅಕ್ಷಯ್ ಹೋಗಲಿದ್ದಾರೆ.
ಒಟ್ಟಾರೆ, ನಾಲ್ಕು ತಿಂಗಳುಗಳ ಕಾಲು ಸುಮ್ಮನೆ ಕಳೆದಿರುವ ಅಕ್ಷಯ್, ಮುಂದಿನ ದಿನಗಳಲ್ಲಿ ಎಲ್ಲಾ ಹಳೆಯ ಚಿತ್ರಗಳನ್ನು ಮುಗಿಸುವ ಯೋಚನೆಯಲ್ಲಿದ್ದಾರೆ. ಇದರಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆಯೋ ನೋಡಬೇಕು.