ಸರ್ವೋದಯ ಶಾಲೆ ತಾಲೂಕಿಗೆ ಮಾದರಿ : ದಯಾನಂದ ರೈ ಮೆಚ್ಚುಗೆ

New Project (51)
Published on

ಪುತ್ತೂರು ಗ್ರಾಮಾಂತರ: ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುವುದರ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸಾಧನೆಗೈಯ್ಯುತ್ತಿರುವ ಸುಳ್ಯಪದವಿನ ಸರ್ವೋದಯ ವಿದ್ಯಾಸಂಸ್ಥೆ ತಾಲೂಕಿಗೆ ಮಾದರಿ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ ಶಿಕ್ಷಕ ದಯಾನಂದ ರೈ ಕೋರ್ಮಂಡ ಶ್ಲಾಘಿಸಿದರು.

ಸುಳ್ಯಪದವು ಸರ್ವೋದಯ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನೆಟ್ಟಣಿಗೆಯ ಮಧುವನ ದಿ.ಡಾ.ಕೆ.ಪಿ.ಬಾಲಕೃಷ್ಣ ರೈ ಅವರ ಸ್ಮರಣಾರ್ಥ ವಿದ್ಯಾಸಂಸ್ಥೆಯ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಪಾಲಕರಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ‘ಮಧುವನ ಸಿಂಚನ’ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಕ್ತಕ್ಕೋಡಿ ಎಸ್‌ಜಿಎಂ ಪ್ರೌಢಶಾಲೆ ನಿವೃತ ಮುಖ್ಯಶಿಕ್ಷಕ ಶ್ರೀನಿವಾಸ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.

ಬೆಳ್ಳೂರು ಸೇವಾ ಭಾರತಿ ಬ್ಯಾಂಕ್ ಉದ್ಯೋಗಿ ಜಯಾನಂದ ಕುಳ ಕಾರ್ಯಕ್ರಮ ಉದ್ಘಾಟಿಸಿದರು. ಹಳೇ ವಿದ್ಯಾರ್ಥಿ ಬಾಲರಾಜ್ ರೈ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಶಿವರಾಮ್ ಎಚ್.ಡಿ., ಸಂಚಾಲಕ ಮಹದೇವ ಭಟ್ ಎಸ್.ಕೊಳ್ಯ, ಪ್ರೌಢ ಮತ್ತು ಪ್ರಾಥಮಿಕ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಆನಂದ ಪಾದೆಗದ್ದೆ ಹಾಗೂ ಅಬ್ದುಲ್ ಖಾದರ್ ಸುಳ್ಯ ಪದವು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸುಖೇಶ್ ರೈ ಎನ್. ಸ್ವಾಗತಿಸಿದರು. ಸ್ವಾತಿ ವಂದಿಸಿದರು. ಪ್ರಶಾಂತಿ ರೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net