ಹಿರಿಯರ ವಿರುದ್ಧದ ಏಕವಚನ ಪ್ರಯೋಗ ಒಪ್ಪಲ್ಲ: ಸಿ.ಟಿ. ರವಿ

CT Ravi
Published on

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಸಂಸದ ಅನಂತ್​ ಕುಮಾರ್​ ಹೆಗಡೆ ನೀಡಿರುವ ಹೇಳಿಕೆಯನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ. ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನ ಹಿರೇಮಗಳೂರು ಕೋದಂಡ ರಾಮಚಂದ್ರಸ್ವಾಮಿ ದೇಗುಲದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡು ಮಾತನಾಡಿದ ಸಿ.ಟಿ. ರವಿ, ಹಿರಿಯರಿಗೆ ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಬೇಕು ಎಂದು ತಾಕಿತು ಮಾಡಿದ್ದಾರೆ.

ಹಿರಿಯರಿಗೆ ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಬೇಕು. ರಾಮ ಎಂದರೆ ಎಲ್ಲರನ್ನೂ ಜೋಡಿಸಿಕೊಂಡು ಹೋಗುವವನು. ಅನಂತಕುಮಾರ್ ಹೆಗಡೆ ಅವರ ಕಾರ್ಯಶೈಲಿ ಭಿನ್ನ ಇದೆ. ಹಾಗೆಂದ ಮಾತ್ರಕ್ಕೆ ಮತ್ತೊಬ್ಬರಿಗೆ ನೋವುಂಟು ಮಾಡುವ ಹೇಳಿಕೆಯನ್ನು ನಾವು ಸಮರ್ಥಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಂ ದಾಳಿಕೋರರು 42 ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ನಾಶ ಮಾಡಿದ್ದಾರೆ ಎಂಬುದು ಅವರ ಭಾವನೆ ಇರಬಹುದು. ಮೊಗಲರು, ನಿಜಾಮರು, ಘಜ್ನಿ ಮೊಹಮದ್, ಘೋರಿ ಮಹಮದ್, ಔರಂಗಜೇಬ್, ಮಲ್ಲಿಕಾಫರ್, ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಹಿಂದೂ ದೇಗುಲಗಳನ್ನು ನಾಶ ಮಾಡಿ ಮಸೀದಿ ಕಟ್ಟಿರುವುದು ನಿಜ. ಆದರೆ, ಈ ದೇಶದ ಮುಸ್ಲಿಮರು ದಾಳಿಕೋರರ ಜತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ. ಭಾರತೀಯತೆ ಮತ್ತು ಸನಾತನ ಪರಂಪರೆ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ.

ಎಲ್ಲಾ ಮುಸ್ಲೀಮರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವುದಿಲ್ಲ. ಭಾರತದಲ್ಲಿರುವ ಮುಸ್ಲಿಮರು ಘಜ್ನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಬರಬೇಕು. ಶಿಶುನಾಳ ಶರೀಫರು ಮತ್ತು ಎಪಿಜೆ ಅಬ್ದುಲ್ ಕಲಾಮ್ ಅಂತವರು  ಮುಸ್ಲಿಮರಿಗೆ ಆದರ್ಶ ಆಗಬೇಕು. ಅನಂತಕುಮಾರ್ ಹೆಗಡೆ ಅವರನ್ನು ಟೀಕೆ ಮಾಡುವ ಭರದಲ್ಲಿ ಅವರನ್ನು ನಾಯಿಗೆ ಹೋಲಿಸಿರುವುದು ತಪ್ಪು. ಪ್ರಧಾನ ಮಂತ್ರಿ ಬಗ್ಗೆ ಸಿದ್ದರಾಮಯ್ಯ ಏಕ ವಚನ ಪ್ರಯೋಗ ಮಾಡುವುದೂ ತಪ್ಪು. ಹಿರಿಯರು ದೊಡ್ಡತನದಿಂದ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net