ಜಲಜೀವನ ಕಾಮಗಾರಿಯಿಂದ ರಸ್ತೆ ಬಿರುಕು : ದುರಸ್ತಿ ಬಳಿಕ ಕೆಲಸ ಆರಂಭಿಸಲು ತಾಕೀತು ಕಾಣಿಯೂರಲ್ಲಿ ಜಂಟಿ ಸಭೆ

New Project (33)
Published on

ಕಡಬ: ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ವೇಳೆ ರಸ್ತೆಗಳಿಗೆ ಹಾನಿ ಉಂಟಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯಿತಿ ಜಂಟಿ ಸಭೆಯು ಕಾಣಿಯೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕಾಮಗಾರಿ ಸಂದರ್ಭದಲ್ಲಿ ರಸ್ತೆ ಬಿರುಕುಬಿಟ್ಟು ಹಾನಿ ಉಂಟಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾನಿಯಾಗಿರುವ ರಸ್ತೆ ಮತ್ತು ಚರಂಡಿ ಪೈಪ್‌ಲೈನ್ ಸರಿಪಡಿಸಿದ ನಂತರವೇ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಸಂಬಂಧಪಟ್ಟ ಜಲಜೀವನ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರು ಯೋಜನೆ ಗುತ್ತಿಗೆದಾರರಿಗೆ ಸಭೆಯಲ್ಲಿ ಸದಸ್ಯರು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಅಂಬಾಕ್ಷಿ ಕೂರೇಲು, ತೇಜಕುವಾರಿ ಉದ್ಲಡ್ಡ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದ ಕಿರಿಯ ಅಭಿಯಂತ ಸಂಗಪ್ಪ ಹುಕ್ಕೇರಿ, ಪಿಡಿಒ ರು ಬಿ.ಎನ್., ಚಾರ್ವಾಕ ಸಿಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ದೇವಿನಗರ, ಲೋಕೇಶ್ ಅತಾಜೆ, ಗುತ್ತಿಗೆದಾರರಾದ ನವೀನ್, ಚೈತ್ರೇಶ್, ನಿತಿನ್ ಮತ್ತಿತರರಿದ್ದರು.

ತಕ್ಷಣ ಸಮಸ್ಯೆ ಬಗೆಹರಿಸಲು ಸೂಚನೆ

ಜಲಜೀವನ್ ಮಿಷನ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಮತ್ತು ಕಾಮಗಾರಿ ವೇಳೆ ವಿವಿಧ ಕಡೆಗಳಲ್ಲಿ ಹಾನಿಯಾದ ರಸ್ತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಒ, ಸದಸ್ಯರ ಸಮ್ಮುಖದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಕ್ಷಣ ಸಮಸ್ಯೆ ಬಗೆಹರಿಸುವಂತೆ ಮತ್ತು ಶ್ರೀದಲ್ಲಿ ಕಾಮಗಾರಿ ಮುಗಿಸುವಂತೆ ದ.ಕ.ಜಿ.ಪಂ. ಇಂಜಿನಿಯರ್ ವಿಭಾಗದ ಕಿರಿಯ ಅಭಿಯಂತ ಸಂಗಪ್ಪ ಹುಕ್ಕೇರಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಪ್ರತಿಭಟನೆ ಎಚ್ಚರಿಕೆ ಹಿನ್ನೆಲೆ ಸಮಾಲೋಚನೆ

ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಮತ್ತು ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕಾಮಗಾರಿಗಳಿಂದ ರಸ್ತೆ ತೀರ ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಹಲವು ಅಪಘಾತ ಸಂಭವಿಸಿದೆ. ಕೆಲವು ರೈತರ ಜಮೀನಿಗೆ ಹೋಗುವ ನೀರಾವರಿ ಪೈಪ್ ತುಂಡಾಗಿ ಹಾನಿಯಾಗಿದೆ. ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್, ಗುತ್ತಿಗೆದಾರರ ಜತೆ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಕೇಳಿಕೊಳ್ಳುವುದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆನೀಡುವ ಕುರಿತು ನ.5ರಂದು ನಡೆದ ಗ್ರಾಮ ಪಂಚಾಯಿತಿ ಸಾವಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯಿತಿ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net