ನರೇಗಾಕ್ಕೆ ವಾಟ್ಸ್‌ಆ್ಯಪ್ ನೋಂದಣಿ : ಸುಳ್ಯದಲ್ಲಿ ಯೋಜನೆ ಯಶಸ್ಸಿಗೆ ಡಿಜಿಟಲ್ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ

New Project (31)
Published on

ಗಣೇಶ್ ಮಾವಂಜಿ ಸುಳ್ಯ

ಸುಳ್ಯ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ವೈಯಕ್ತಿಕ ಹಾಗೂ ಗುಂಪು ಕಾಮಗಾರಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದ್ದು, ಸುಳ್ಯ ತಾಪಂ ಅತಿ ಹೆಚ್ಚು ರೈತರನ್ನು ಈ ಯೋಜನೆಯಡಿ ನೋಂದಣಿಗೆ ತಂತ್ರಜ್ಞಾನದ ಮೊರೆ ಹೋಗಿರುವುದು ವಿಶೇಷ.

ಇದೇ ಮೊದಲ ಬಾರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕೆಲಸಗಳಿಗೆ ಕ್ರಿಯಾಯೋಜನೆಯಲ್ಲಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಮಾಹಿತಿಯ ಕೊರತೆ ಮತ್ತಿತರ ಕಾರಣದಿಂದ ದ.ಕ. ಜಿಲ್ಲೆ ನರೇಗಾ ಯೋಜನೆಯಡಿ ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡುವಲ್ಲಿ ಹಿಂದುಳಿದಿತ್ತು. ಆದರೆ ಸುಳ್ಯ ತಾಲೂಕಿನಲ್ಲಿ ಈ ಯೋಜನೆಯಡಿ ಹೆಸರು ನೋಂದಣಿಗೆ ತಂತ್ರಜ್ಞಾನದ ಮೊರೆ ಹೋಗಿದ್ದು, ಈ ಮೂಲಕ ರೈತರನ್ನು ಸುಲಭವಾಗಿ ಸಂಪರ್ಕಿಸಿ ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿ ನಡೆಸಲು ಮಾಹಿತಿ ನೀಡುವುದಲ್ಲದೆ ರೈತರಿಗೆ ಈ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೇರೇಪಿಸುತ್ತಿದೆ.

ಪ್ರಕ್ರಿಯೆ ಹೇಗೆ?: ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್ ಕಳುಹಿಸುವ ಆಯ್ಕೆಯಲ್ಲಿ ಪೋಲ್(ಮತದಾನ) ಎನ್ನುವ ಮತ್ತೊಂದು ಆಯ್ಕೆಯಿದ್ದು, ಅದರಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ತಿಳಿಸುವ ಪ್ರಶ್ನಾವಳಿ ಮಾಡಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಹೆಸರು ನೋಂದಾಯಿಸಲು ಇಚ್ಛಿಸುತ್ತೀರೋ? ಹೌದಾಗಿದ್ದರೆ ಯಾವ ಕಾಮಗಾರಿ ಕೈಗೊಳ್ಳುತ್ತೀರಿ? ಎಂಬ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇದನ್ನು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಸಾರ್ವಜನಿಕರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳುಹಿಸಿ ಪ್ರತಿಕ್ರಿಯೆ ಪಡೆಯಲಾಗುತ್ತದೆ. ಕಾಮಗಾರಿಗೆ ಹೆಸರು ನೋಂದಾಯಿಸಲು ಇಚ್ಛಿಸುವುದಾಗಿ ಯಾರೇ ಕ್ಲಿಕ್ಕಿಸಿದರೂ ಅದನ್ನು ಅದಕ್ಕೆಂದೇ ನಿಯೋಜಿಸಲಾದ ಸಿಬ್ಬಂದಿ ಆ ವ್ಯಕ್ತಿಯ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಕ್ರಿಯಾಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ನಡೆಯುತ್ತದೆ.

ವೈಯಕ್ತಿಕ ಕಾಮಗಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಲಭ್ಯವಿದ್ದ ಸಮಯಾವಕಾಶ ಈಗಾಗಲೇ ಕೊನೆಗೊಂಡಿರುವುದರಿಂದ ಅತಿ ಹೆಚ್ಚು ರೈತರನ್ನು ಸಂಪರ್ಕಿಸಿ ಅವರಿಂದ ವಿವರ ಪಡೆದುಕೊಂಡು ಪ್ರತಿ ಗ್ರಾಪಂನಿಂದ ಈ ಯೋಜನೆಯ ವಾರ್ಷಿಕ ಕ್ರಿಯಾಯೋಜನೆ ಹಾಗೂ ಡಿಪಿಆರ್ ತಾಪಂಗೆ ಮುಂಬರುವ ಡಿ.5ರ ಮೊದಲು ಸಲ್ಲಿಸುವಂತೆ ಸೂಚಿಸಲಾಗಿದೆ. ಅಲ್ಲದೆ ತಾಲೂಕಿನ ಪ್ರತಿ ಗ್ರಾಪಂನಲ್ಲೂ ನವೆಂಬರ್ ಅಂತ್ಯಕ್ಕೆ ಮೊದಲು ಗ್ರಾಮಸಭೆ ನಡೆಸಿ ನರೇಗಾ ಯೋಜನೆಯ ಕುರಿತಂತೆ ಮಾಹಿತಿ ನೀಡಬೇಕೆಂದು ಸೂಚಿಸಲಾಗಿದೆ.

ಪೋಸ್ಟರ್, ಕರಪತ್ರ ಮೂಲಕ ಪ್ರಚಾರ

ಯೋಜನೆಯ ಕುರಿತಾಗಿ ವಿವರ ನೀಡುವ ಪೋಸ್ಟರ್‌ಗಳನ್ನು ಪ್ರಕಟಿಸಿ ಅದನ್ನು ಜನಸಂದಣಿ ಇರುವ ಪ್ರದೇಶಗಳಲ್ಲಿ ಅಂಟಿಸುವುದು, ಕರಪತ್ರಗಳನ್ನು ರೈತರಿಗೆ ಹಂಚುವುದು, ವಾಹನಗಳಲ್ಲಿ ಮೈಕ್ ಮುಖಾಂತರ ಪ್ರಚಾರ ನೀಡುವುದು, ಪಂಚಾಯಿತಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಮಾಹಿತಿ ನೀಡುವುದು ಇತ್ಯಾದಿ ಪ್ರಕ್ರಿಯೆ ಹಮ್ಮಿಕೊಳ್ಳಲಾಗುತ್ತಿದೆ.

ಡಿಸೆಂಬರ್ 5ರ ಮೊದಲು ಕ್ರಿಯಾಯೋಜನೆ ಹಾಗೂ ಡಿಪಿಆರ್ ಸಲ್ಲಿಸಬೇಕಾದುದರಿಂದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಮಸಭೆ ನಡೆಸಿ ವಿವರ ನೀಡಿ ರೈತರಿಂದ ಹೆಸರು ನೋಂದಾಯಿಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ತಾಲೂಕಿನಿಂದ ವೈಯಕ್ತಿಕ ಕಾಮಗಾರಿಗೆ 150ಕ್ಕಿಂತಲೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ವಾಟ್ಸ್‌ಆ್ಯಪ್ ಪೋಲ್ ಮುಖಾಂತರ ಕೈಗೊಂಡ ಪ್ರಯತ್ನ ಯಶಸ್ಸು ಕಾಣುತ್ತಿದ್ದು ಈ ತಿಂಗಳ ಅಂತ್ಯದೊಳಗೆ ಗರಿಷ್ಠ ಅರ್ಜಿ ಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ರಾಜಣ್ಣ, ಸುಳ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ https://www.vijayavani.net/kasargodu-chinna https://www.vijayavani.net/priyadarshini-society-customer-day-celebration

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net